ಭಾರತದ ಸ್ವಾತಂತ್ರ್ಯದ ಸಂಗ್ರಾಮದ ಬೆಳ್ಳಿಚುಕ್ಕಿ ವೀರ ರಾಣಿ ಕಿತ್ತೂರು ಚನ್ನಮ್ಮಳ ಪುತ್ಥಳಿಯ ಅನಾವರಣ ರಾಷ್ಟ್ರದ ಪ್ರಥಮ ಮಹಿಳಾ ರಾಷ್ಟ್ರಾಧ್ಯಕ್ಷೆ ಶ್ರೀಮತಿ ಪ್ರತಿಭಾ ದೇವಿ ಪಾಟೀಲ್ ಶೇಖಾವತ್ ಅವರಿಂದ ಸಂಸತ್ತಿನ ಆವರಣದಲ್ಲಿ ಮಂಗಳವಾರ ಜರುಗಿತು.
ಸಮಾರಂಭದಲ್ಲಿ ಪ್ರಧಾನಿ ಮನ್ ಮೋಹನ್ ಸಿಂಗ್, ಕೇಂದ್ರ ಗೃಹ ಖಾತೆ ಸಚಿವ ಶಿವರಾಜ್ ಪಾಟೀಲ್. ಲೋಕಸಭಾಧ್ಯಕ್ಷ ಸೋಮನಾಥ್ ಚಟರ್ಜಿ ಮತ್ತು ವಿರೋಧ ಪಕ್ಷ ನಾಯಕ ಎಲ್ ಕೆ ಅಡ್ವಾಣಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇಂದಿನ ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕಿತ್ತೂರು, ಕಿತ್ತೂರು ಸಂಸ್ಥಾನದ ರಾಜಧಾನಿಯಾಗಿತ್ತು. ಸಂಸ್ಥಾನದ ಆಳರಸ ಮಲ್ಲಸರ್ಜ ದೇಸಾಯಿಯ ಅಕಾಲಿಕ ನಿದನದಿಂದ ಆಡಳಿತ ಸೂತ್ರವನ್ನು ಕೈಗೆ ತೆಗೆದುಕೊಂಡ ಆತನ ಪತ್ನಿ ಚೆನ್ನಮ್ಮ ಬ್ರಿಟಿಷರ ದತ್ತು ಕಾಯಿದೆಯನ್ನು ದಿಕ್ಕರಿಸಿ, ಶಿವಲಿಂಗ ಸರ್ಜನನ್ನು ಸಿಂಹಾಸನದ ಮೇಲೆ ಕೂರಿಸಿ ರಾಜ್ಯಭಾರ ನಡೆಸಿದಳು.
ಇದರಿಂದ ಅಕ್ರೋಶಗೊಂಡ ಬ್ರಿಟಿಷರು ಕಿತ್ತೂರಿನ ಮೇಲೆ ಯುದ್ಧ ಸಾರಿದರು. ಕಿತ್ತೂರು ಸಂಸ್ಥಾನ ಮತ್ತು ಬ್ರಿಟಿಷರ ನಡುವೆ ನಡೆದ ಮೊದಲ ಯುದ್ಧದಲ್ಲಿ ಚೆನ್ನಮ್ಮ ವೀರಾವೇಶದಿಂದ ಹೋರಾಡಿ ಜಯ ಸಾಧಿಸಿದಳು.
ಎರಡನೆ ಯುದ್ಧದಲ್ಲಿ ದೇಶದ್ರೋಹಿಗಳಾದ ಮಲ್ಲಪ್ಪ ಶೇಟ್ಟಿಯಿಂದ ಚೆನ್ನಮ್ಮ ಸೋತು, ಬ್ರಿಟಿಷರ ಬಂಧಿಯಾಗಿ ಕೊನೆಗೆ ಬೈಲಹೊಂಗಲದಲ್ಲಿನ ಕಾರಾಗೃಹದಲ್ಲಿ ಅಸುನಿಗಿದಳು.
ಸಮಾರಂಭದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಿಯರಂಜನ್ ದಾಸ್ ಮುನ್ಷಿ, ಬಾಜಪದ ಹಿರಿಯ ನಾಯಕಿ ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು, ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಎನ್ ಧರಮ್ ಸಿಂಗ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
|