ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್ ಪಕ್ಷ ಬುಧವಾರ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಹಲವಾರು ಯೋಜನೆಗಳನ್ನೊಳಗೊಂಡ ಪ್ರಣಾಳಿಕೆಯಲ್ಲಿ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ನನ್ನದೇ ಸೂರು ಎಂಬ ಮನೆ ರಹಿತರಿಗೆ ಮನೆ ಕಟ್ಟಿಕೊಡುವ ಯೋಜನೆ ಮುಖ್ಯವಾದುದು.
ಪಟ್ಟಣ ಪ್ರದೇಶಗಳನ್ನು ಕೊಳಗೇರಿಗಳು ಹಾಗೂ ಗುಡಿಸಲು ರಹಿತವನ್ನಾಗಿ ಮಾಡುವುದು, ಶಾಲೆಗಳಿಗೆ ಶೌಚಾಲಯಗಳ ನಿರ್ಮಾಣ, ಉತ್ತಮ ಆಡಳಿತ ನಿರ್ವಹಣೆ, ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಜಾನುವಾರುಗಳ ರಕ್ಷಣೆ, ಪಟ್ಟಣಕ್ಕೊಂದು ಈಜುಕೊಳ ನಿರ್ಮಾಣ, ಗ್ರಂಥಾಲಯಗಳ ನಿರ್ಮಾಣ ಮುಂತಾದ ಯೋಜನೆಗಳ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆ ವಿವರಿಸಿದೆ.
ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ ಅಧಿಕಾರ ಹಸ್ತಾಂತರ ವಿವಾದಾಸ್ಪದವಾಗಿದ್ದು, ಅದು ಸಾಧ್ಯವಾಗದಿದ್ದರೆ ಮಧ್ಯಂತರ ಚುನಾವಣೆ ನಿರ್ವಹಿಸುವುದೇ ಕ್ಷೇಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಸರ್ಕಾರಿ ಭೂ ಒತ್ತುವರಿ ಪ್ರಕರಣದಲ್ಲಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು ಅವರ ಪುತ್ರ ಜಗದೀಶ್ ನಾಯ್ಡು ಸಿಲುಕಿರುವುದರಿಂದ ತಕ್ಷಣ ಅವರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
|