ನಕ್ಸಲ್ ಪೀಡಿತ ಪಶ್ಚಿಮಘಟ್ಟದಲ್ಲಿ ಕೈಗೊಳ್ಳಬೇಕಾದ ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ಆ ಪ್ರದೇಶದ ಶಾಸಕರ ಸಭೆಯನ್ನು ಗುರುವಾರ ಆಯೋಜಿಸಲಾಗಿತ್ತು. ಆದರೆ ಗೃಹಸಚಿವ ಎಂ.ಪಿ.ಪ್ರಕಾಶ್ ಗೈರುಹಾಜರಾದ್ದರಿಂದ ಮಹತ್ವದ ಚರ್ಚೆಯನ್ನು ಬಿಟ್ಟು ಉಳಿದಿದ್ದನ್ನು ಕುರಿತು ಚರ್ಚಿಸಲಾಯಿತು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಸಚಿವರಾದ ನಾಗರಾಜಶೆಟ್ಟಿ, ಡಾ.ವಿ.ಎಸ್. ಆಚಾರ್ಯ, ಶಾಸಕರಾದ ಸಿ.ಟಿ.ರವಿ ಮುಂತಾದವರು ಭಾಗವಹಿಸಿದ್ದರು.
ಅತಿವೃಷ್ಟಿಯಿಂದಾಗಿ ಏಲಕ್ಕಿ, ಮೆಣಸು, ರಬ್ಬರ್, ಶುಂಠಿ ಮುಂತಾದ ಬೆಳೆಗಳ ನಷ್ಟವನ್ನು ಅಂದಾಜಿಸಿ ಅದಕ್ಕೆ ಪರಿಹಾರ ನೀಡುವ ಸಲುವಾಗಿ ಹೈಪವರ್ ಕಮಿಟಿಯನ್ನು ರಚಿಸಲಾಯಿತು.
ಕಂದಾಯ ಇಲಾಖೆಯ ಮುಖ್ಯಕಾರ್ಯದರ್ಶಿ ನೇತೃತ್ವದ ಈ ಸಮಿತಿಯಲ್ಲಿ ಐವರು ಅಧಿಕಾರಿಗಳು ಹಾಗೂ ಮೂವರು ರೈತ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ.
ಈ ಸಮಿತಿ ನೀಡುವ ವರದಿಯನ್ನಾಧರಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಭೆಯ ನಂತರ ಬಂದರು ಸಚಿವ ನಾಗರಾಜ ಶೆಟ್ಟಿ ಸುದ್ದಿಗಾರರಿಗೆ ತಿಳಿಸಿದರು.
|