ಇದು ಹಬ್ಬಗಳ ಸೀಜನ್. ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ರಾಜ್ಯದಲ್ಲಿ ಗೌರಿ-ಗಣೇಶ ಹಬ್ಬವನ್ನು ಸಂಭ್ರಮವಾಗಿ ಆಚರಿಸಲು ಜನರು ಸಜ್ಜಾಗುತ್ತಿದ್ದಾರೆ.
ಗಣೇಶ ಚುತುರ್ಥಿ ಬಂತೆಂದರೆ ಬೀದೀಬೀದಿಯಲ್ಲಿ ಗಣಪತಿ ಕೂರಿಸ್ತವಿ ಎಂದು ಚಂದಾ ಎತ್ತುವವರಿಗೆ ಬರವಿಲ್ಲ. ಈ ಉತ್ಸವವನ್ನು ಅದ್ದೂರಿಯಾಗಿ ಜನರಿಗೆ ತೊಂದರೆ ನೀಡದೇ ನಡೆಸುವವರೂ ಇದ್ದಾರೆ.
ಆದರೆ ಕೆಲ ಸಮಾಜ ಕಂಟಕರೂ ಇದೇ ಸಮಯದಲ್ಲಿ ಅವರೊಂದಿಗೆ ಸೇರಿಕೊಂಡು ಚಂದಾ ಮೂಲಕ ಹಣಗಳಿಕೆಗೆ ಮುಂದಾಗುವುದು ಉಂಟು. ಅಂಥವರನ್ನು ಹದ್ದುಬಸ್ತುನಲ್ಲಿಡಲು ಪೊಲೀಸರು ಪ್ರಯತ್ನ ಮಾಡುತ್ತಾರೆ.
ಅದರ ಪರಿಣಾಮ ಮಾತ್ರ ಅಷ್ಟಕ್ಕಷ್ಟೆ. ಪ್ರತಿಬಾರಿ ಗಣೇಶ ಚುತುರ್ಥಿಗೆ ಮೊದಲು ಗಣಪತಿ ಕೂರಿಸ್ತಿವಿ ಎಂದು ಚಂದಾ ಎತ್ತುವರಿಗೆ ಎಚ್ಚರಿಕೆ ನೀಡುವಂತೆ ಈ ಬಾರಿಯೂ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರಿಂದ ಬಲವಂತವಾಗಿ ಚಂದಾ ವಸೂಲಿಗೆ ಮುಂದಾದರೆ ಪೊಲೀಸರ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ನೀಲಂ ಅಚ್ಯುತರಾವ್ ಎಚ್ಚರಿಸಿದ್ದಾರೆ.
ರಸ್ತೆಗಳಲ್ಲಿ ಸಾರ್ವಜನಿಕರಿಗೆ ಅನಾನುಕೂಲವಾಗುವಂತೆ ಪೆಂಡಾಲ್‌ಗಳನ್ನು ಹಾಕುವುದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮೈಕನ್ನು ಬಳಸುವಂತಿಲ್ಲ, ಮತ್ತು ಸಿಡಿಮದ್ದುಗಳನ್ನು ಸಿಡಿಸುವಂತಿಲ್ಲ ಎಂದು ಹೇಳಿದ್ದಾರೇನೋ ಸರಿ. ಆದರೆ ಇವೆಲ್ಲವೂ ಜಾರಿ ಆಗುವುದೇ ಅನುಮಾನ.
ಗೌರಿ-ಗಣೇಶ ಹಬ್ಬದ ನಿಮಿತ್ತ ದೂರ ದೂರುಗಳಿಂದ ಹೂವು ಮಾರಾಟ ಮಾಡಲೆಂದು ನಗರಕ್ಕೆ ಬಂದಿದ್ದ ರೈತರು ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಪರದಾಡುವಂತಾಗಿದೆ.
|