ಶ್ರೀರಾಮನ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಹೇಳಿಕೆಗಳನ್ನು ವಿರೋಧಿಸಿ ಆ ರಾಜ್ಯದ ಬಸ್‌ಗೆ ಬೆಂಕಿ ಹಚ್ಚಿ ಇಬ್ಬರು ವ್ಯಕ್ತಿಗಳನ್ನು ಸಜೀವ ದಹನ ಮಾಡಿದ ಹಾಗೂ ಸೆಲ್ವಿ ಅವರ ಮನೆಯ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಪೊಲೀಸರು ಒಟ್ಟು 13 ಮಂದಿಯನ್ನು ಬಂಧಿಸಿದ್ದಾರೆ. ಬಸ್ಸಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಬಂಧಿತರಾದವರಲ್ಲಿ 10 ಮಂದಿ ಬೊಮ್ಮನಹಳ್ಳಿ ನಿವಾಸಿಗಳು. ಬಂಧಿತರು ಯಾವ ಸಂಘಟನೆಗೆ ಸೇರಿದವರು ಎಂಬುದನ್ನು ಪೊಲೀಸರು ಬಹಿರಂಗಪಡಿಸುತ್ತಿಲ್ಲ.
ಕರುಣಾನಿಧಿ ಪುತ್ರಿ ಸೆಲ್ವಿ ಮನೆಮೇಲೆ ದಾಳಿ ಹಾಗೂ ಹೊಸೂರು ರಸ್ತೆಯಲ್ಲಿ ತಮಿಳುನಾಡು ಬಸ್ಸಿಗೆ ಬೆಂಕಿ ಹಚ್ಚಿದ ಕೃತ್ಯಗಳನ್ನು ಒಂದೇ ತಂಡ ನಿರ್ವಹಿಸಿದೆ ಎಂದು ಭಾವಿಸಲಾಗುತ್ತಿದೆ. ಪ್ರಕರಣದಲ್ಲಿ ಇನ್ನೂ ಹೆಚ್ಚು ಮಂದಿ ತೊಡಗಿಸಿಕೊಂಡಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ಉಳಿದವರ ಬಂಧನಕ್ಕೆ ಸಜ್ಜಾಗುತ್ತಿದ್ದಾರೆ.
ಜೆಲ್ಲಿ ವ್ಯಾಪಾರ ಮಾಡುವ ಮುರುಗನ್ ಸೆಲ್ವಿ ಅವರ ಮನೆ ತೋರಿಸಿ, ಪೂರ್ವ ಯೋಜನೆ ಸಿದ್ಧಪಡಿಸುವಲ್ಲಿ ನೆರವಾಗಿದ್ದ. ರಾಜೇಶ್ ಎಂಬಾತ ಗೃಹೋಪಯೋಗಿ ವಸ್ತುಗಳ ವ್ಯಾಪಾರ ನಿರ್ವಹಿಸುತ್ತಿದ್ದ ಎನ್ನಲಾಗಿದೆ.
ಆರೋಪಿಗಳಲ್ಲಿ ರಂಗಸ್ವಾಮಿ ಎಂಬಾತ ವಕೀಲನಾಗಿದ್ದು, ಪ್ರಕರಣದಲ್ಲಿ ಭಾಗಿಯಾಗುವುದರ ಜೊತೆಗೆ ಇತರ ಆರೋಪಿಗಳಿಗೆ ಆಶ್ರಯ ನೀಡಿದ್ದ.
|