ರಾಜ್ಯದಲ್ಲಿ ಅತಿವೃಷ್ಟಿ ಪೀಡಿತ ಪ್ರದೇಶಗಳಲ್ಲಿ ಆದ ನಷ್ಟದ ಬಗ್ಗೆ ವಿವರ ನೀಡಿ 6,500 ಕೋಟಿ ರೂ. ಗಳ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಲಿದೆ.
ಕಳೆದ ಬಾರಿ ಮಳೆಯಿಂದಾಗಿ ಆಗಿರುವ ನಷ್ಟಕ್ಕೆ ಇನ್ನೂ ಕೇಂದ್ರ ಸರ್ಕಾರದಿಂದ ಪರಿಹಾರ ದೊರೆತಿಲ್ಲ. ಈ ಬಾರಿಯಾದರೂ ಪರಿಹಾರ ನೀಡುವಂತೆ ಪುನಃ ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಪ್ರವಾಹ ಪರಿಸ್ಥಿತಿ ಪರೀಶೀಲನೆ ನಡೆಸಲಿರುವ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟಿಲ್ ಅವರಿಗೆ 5000 ಕೋಟಿ ರೂ. ವಿಶೇಷ ನೆರವು ನೀಡುವಂತೆ ಮುಖ್ಯಮಂತ್ರಿ ಮನವಿ ಮಾಡಲಿದ್ದಾರೆ.
ಸಂಜೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಕೇಂದ್ರ ಸಚಿವ ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ಮಳೆ ಹಾನಿ ಹಾಗೂ ಪ್ರವಾಹ ಪರಿಸ್ಥಿತಿ ಪರೀಶೀಲನಾ ಸಬೆ ನಡೆಯಲಿದೆ.
ಈ ಸಭೆಯಲ್ಲಿ ಕೇಂದ್ರ ಸಚಿವೆ ರಾಧಿಕಾ ಸೆಲ್ವಿ, ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಂದಾಯ ಸಚಿವ ಜಗದೀಶ್ ಶೆಟ್ಟರ್ ಸೇರಿದಂತೆ ಕೇಂದ್ರ ಹಾಗೂ ರಾಜ್ಯಸರ್ಕಾರದ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಸಭೆಯಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಉಂಟಾಗಿರುವ ಹಾನಿಯ ಬಗ್ಗೆ ವಿಡಿಯೋ ಹಾಗು ಸ್ಥಿರ ಚಿತ್ರದ ತುಣುಕುಗಳನ್ನು ಕೇಂದ್ರ ಸಚಿವರಿಗೆ ಪ್ರದರ್ಶಿಸುವ ಮೂಲಕ ಪರಿಸ್ಥಿತಿಯ ತೀವ್ರತೆಯನ್ನು ಮನವರಿಕೆ ಮಾಡಿಕೊಡಲಿದ್ದಾರೆ.
ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕಳೆದ 10 ದಿನಗಳಲ್ಲಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದ ಸುಮಾರು 600 ಕೋಟಿ ರೂ. ನಷ್ಟ ಸಂಭವಿಸಿದೆ.
ಮಳೆಯಿಂದಾಗಿ 35 ಜನರು ಸಾವನ್ನಪ್ಪಿದ್ದು, 2.6 ಎಕರೆ ಬೆಳೆ ನಾಶ, 47 ಸಾವಿರ ಮನೆಗಳ ನಾಶ, 350 ಜಾನುವಾರುಗಳು ಸತ್ತಿವೆ. ಅತಿವೃಷ್ಟಿಗೀಡಾದ ಜಿಲ್ಲೆಗಳಲ್ಲಿ ನಡೆಸಿದ ಪ್ರಾಥಮಿಕ ಸಮೀಕ್ಷೆಯಿಂದ ಈ ವಿವರ ಲಭ್ಯವಾಗಿದೆ.
ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾದನಂತರ ನಷ್ಟದ ನಿಖರ ಅಂದಾಜು ತಿಳಿಯಲಿದೆ.
|