ನೈಸರ್ಗಿಕ ವಿಕೋಪಕ್ಕೆ ತುತ್ತಾಗಿರುವ ರಾಜ್ಯಕ್ಕೆ ಕೇಂದ್ರದ ನೆರವು ನಿರಾಕರಿಸಿರುವ ಕೇಂದ್ರ ಗೃಹ ಖಾತೆ ಸಚಿವ ಶಿವರಾಜ್ ಪಾಟೀಲ್ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ತೀಕ್ಷ್ಣವಾಗಿ ಅಪಾದಿಸಿದ್ದಾರೆ.
ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಮತ್ತು ರಾಜ್ಯ ಸಚಿವೆ ರಾಧಿಕಾ ಸೆಲ್ವಿ ಅವರ ಭೇಟಿಯ ನಂತರ ಆಗಿರುವ ಬೆಳವಣಿಗೆಗಳ ಕುರಿತು ಅತೃಪ್ತಿ ವ್ಯಕ್ತಪಡಿಸಿರುವ ಅವರು, ಉತ್ತರ ಕರ್ನಾಟಕದ ಬಹುತೇಕ ಭಾಗಗಳು ನೆರೆ ಹಾವಳಿ ಪೀಡಿತವಾಗಿದ್ದು ಕೇಂದ್ರ ತಕ್ಷಣ ತಾತ್ಕಾಲಿಕವಾಗಿ 500 ಕೋಟಿ ರೂ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಉಪ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಿವರಾಜ್ ಪಾಟೀಲ್ ನೆತೃತ್ವದ ಸಭೆಯಲ್ಲಿ ಹಾಜರಿರದೇ ಪರಿಸ್ಥಿತಿಯ ಗಂಭೀರತೆ ಕುರಿತು ರಾಜ್ಯ ಸಚಿವೆ ಸೆಲ್ವಿ ಅವರಿಗೆ ಮಾಹಿತಿ ನೀಡಿ ಕೇಂದ್ರದ ನೆರವು ತಕ್ಷಣ ಬೇಕು ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮನವರಿಕೆ ಮಾಡಿಕೊಟ್ಟಿದ್ದಾರೆ.
ಕೇಂದ್ರ ಸರಕಾರದ ಅದ್ಯಯನ ತಂಡ ವರದಿ ಸಲ್ಲಿಸಿದ ನಂತರ ಕೇಂದ್ರ ಸರಕಾರ ನೆರವು ನೀಡಲಿದೆ ಎಂದು ಶಿವರಾಜ್ ಪಾಟೀಲ್ ಹೇಳಿಕೆ ನೀಡಿದ್ದು, ಈ ಹೇಳಿಕೆ ನೆರೆ ಪರಿಹಾರ ನೀಡುವಲ್ಲಿ ಕೂಡ ಯುಪಿಎ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರವಾಹ ಪೀಡಿತ ಜನರಿಗೆ ಪರಿಹಾರ ನೀಡುವುದಕ್ಕೆ ರಾಜ್ಯ ಸರಕಾರ ಈಗಾಗಲೇ ಎರಡು ಬಾರಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದು, ಮನವಿ ಆಧಾರದ ಮೇಲೆ 4,500 ಕೋಟಿ ರೂಗಳ ನೆರವು ರಾಜ್ಯಕ್ಕೆ ಅವಶ್ಯವಿದೆ ಎಂದು ಮನವಿಗಳಲ್ಲಿ ತಿಳಿಸಲಾಗಿತ್ತು.
ಮನವಿಗಳಿಗೆ ಸ್ಪಂದಿಸಿದ ಕೇಂದ್ರ ಅದ್ಯಯನ ತಂಡವನ್ನು ಕಳುಹಿಸಿ ಕೊಟ್ಟಿದ್ದು ಅದು ಈಗಾಗಲೇ ಮನ್‌ಮೋಹನ್ ಸಿಂಗ್ ಸರಕಾರಕ್ಕೆ ತನ್ನ ವರದಿ ಸಲ್ಲಿಸಿದೆ. ಆದರೆ ಅನುದಾನ ಬಿಡುಗಡೆ ಮಾಡುವಲ್ಲಿ ಯುಪಿಎ ಸರಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಯಡಿಯೂರಪ್ಪ ಅಪಾದಿಸಿದ್ದಾರೆ.
|