ಹಲವಾರು ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಅಘೋಷಿತ ರಜೆ, ಚಿತ್ರಮಂದಿರಗಳು ಖಾಲಿ, ಪ್ರಮುಖ ರಸ್ತೆಗಳಲ್ಲಿ ವಿರಳ ವಾಹನ ಸಂಚಾರ. ಇದು ಸೋಮವಾರ ಮಧ್ಯಾಹ್ನದಿಂದ ಬೆಂಗಳೂರಿನಲ್ಲಿ ಕಂಡು ಬಂದ ಚಿತ್ರಣ.
ಸಂಜೆ 5-30ಕ್ಕೆ ಆರಂಭವಾಗುವ ಟ್ವೆಂಟಿ 20 ಕ್ರಿಕೆಟ್ ಮ್ಯಾಚ್ ನೋಡಲು ಟಿವಿ ಮುಂದೆ ಕುಳಿತುಕೊಳ್ಳಲು ಎಲ್ಲರ ತಯಾರಿ. ಭಾರತದ ತಂಡ ಪಂದ್ಯದಲ್ಲಿ ರೋಮಾಂಚನ ವಿಜಯ ಸಾಧಿಸುತ್ತಿದ್ದಂತೆ ಎಲ್ಲೆಡೆ ವಿಜೃಂಭಣೆಯ ಸಂಭ್ರಮೋತ್ಸವ.
ಹೀಗಾಗಿ ಇಡೀ ಬೆಂಗಳೂರು ಸೋಮವಾರ ರಾತ್ರಿ ಇಡೀ ಎದ್ದಿತ್ತು ಎಂದರೆ ತಪ್ಪಾಗಲಾರದು. ಉಲ್ಲಾಳ ಉಪನಗರದ ವಜ್ರೇಶ್ವರಿ ಸೇರಿದಂತೆ ಕೆಲ ಚಿತ್ರಮಂದಿರಗಳು ಬೃಹತ್ ಪರದೆಯಲ್ಲಿ ಟ್ವೆಂಟಿ 20 ಯ ರಸದೌತಣವನ್ನು ಉಣಬಡಿಸಿದರೆ, ಮಾಲ್‌ಗಳು ಕ್ರಿಕೆಟ್ ಸವಿ ತೋರಿಸಿದವು.
ವಿಜಯೋತ್ಸವ ಆಚರಣೆಯ ಸಂದರ್ಭದಲ್ಲಿ ನಗರದ ಬ್ರಿಗೇಡ್ ರಸ್ತೆ, ಆರ್.ಟಿ.ನಗರ ಹಾಗು ವೈಯಾಲಿಕಾವಲ್ ಪ್ರದೇಶಗಳಲ್ಲಿ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆದಿವೆ.
ಅಲ್ಲದೆ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಮುಂತಾದ ಕಡೆ ವಿಜಯೋತ್ಸವ ಆಚರಣೆ ಸಂದರ್ಭದಲ್ಲಿ ಕ್ರೀಡಾಭಿಮಾನಿಗಳನ್ನು ಚದುರಿಸಲು ಪೊಲಿಸರು ಲಘು ಲಾಠಿ ಪ್ರಹಾರ ನಡೆಸಿದರು. ಗೋರಿ ಪಾಳ್ಯದಲ್ಲೂ ವಿಜಯೋತ್ಸವದ ಸಂದರ್ಭದಲಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ.
|