ಬೆಂಗಳೂರು- ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಯನ್ನು ನೈಸ್ ಕಂಪನಿಯಿಂದ ಕಿತ್ತುಕೊಂಡು ಬೇರೆ ಕಂಪನಿಗೆ ನೀಡಬೇಕು ಎಂದಿದ್ದ ರಾಜ್ಯ ಸರಕಾರದ ಆಶಯಕ್ಕೆ ಸರ್ವೋಚ್ಚ ನ್ಯಾಯಾಲಯ ತಣ್ಣೀರು ಎರೆಚಿದ್ದು, ಯೋಜನೆಗೆ ಆಹ್ವಾನಿಸಲಾಗಿದ್ದ ಟೆಂಡರ್ ಪ್ರಕ್ರಿಯೆಗೆ ಸರ್ವೋಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
1200 ಕೋಟಿ ಅಂದಾಜು ವೆಚ್ಚದ ಈ ಯೋಜನೆಗೆ ಕರ್ನಾಟಕ ಸರಕಾರ ಹೊಸದಾಗಿ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. ನ್ಯಾಯಮೂರ್ತಿ ಪಿ ಎನ್ ಅಗ್ರವಾಲ್ ನೆತೃತ್ವದ ಪೀಠವು ತಡೆಯಾಜ್ಞೆ ಆದೇಶ ನೀಡಿ, ಮುಂದಿನ ವಿಚಾರಣೆಯನ್ನು ನಾಲ್ಕು ವಾರಗಳಿಗೆ ಮುಂದೂಡಿತು.
ನೈಸ್ ಕಂಪನಿಯ ಪರ ಸರ್ವೋಚ್ಚ ನ್ಯಾಯಾಲಯದಲ್ಲಿ ವಾದಿಸಿದ ನ್ಯಾಯವಾದಿ ಅಶೋಕ್ ದೇಸಾಯಿ ಅವರು, ಕರ್ನಾಟಕದ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿ ಅವರಿಗೆ ಸಮನ್ಸ್ ಜಾರಿ ಮಾಡಬೇಕು, ಉಭಯ ಪ್ರತಿವಾದಿಗಳು ನ್ಯಾಯಾಲಯದ ಆದೇಶ ಉಲ್ಲಂಘಿಸಿ, ನ್ಯಾಯಾಲಯ ನಿಂದನೆ ಮಾಡಿದ್ದಾರೆ ಎಂದು ವಾದಿಸಿದರು.
ಸಾವಿರ ಕೋಟಿ ರೂ ವೆಚ್ಚದ ಕಾರಿಡಾರ್ ಯೋಜನೆಯು 111 ಕಿಮಿ ಅಂತರದಲ್ಲಿರುವ ಬೆಂಗಳೂರು ಮತ್ತು ಮೈಸೂರುಗಳಿಗೆ ಏಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಿಸುವುದಾಗಿದ್ದು. ಯೋಜನೆಯ ಅಡಿಯಲ್ಲಿ ಐದು ಸ್ಯಾಟಲೈಟ್ ಟೌನ್‌ಶಿಪ್‌ಗಳನ್ನು ರಸ್ತೆಯುದ್ದಕ್ಕೂ ನಿರ್ಮಿಸುವುದಾಗಿದೆ.
|