ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ 150 ಕೋಟಿ ರೂ. ಲಂಚ ಆರೋಪ ಮಾಡಿದ ಜನಾರ್ದನ ರೆಡ್ಡಿ ಹಾಗೂ ಬಳ್ಳಾರಿ ದೊರೆಗಳಿಂದಲೇ ಬಿಜೆಪಿಗೆ ಅಧಿಕಾರ ಹಸ್ತಾಂತರವಾಗದೇನೋ ಎನ್ನುವಷ್ಟರಮಟ್ಟಿಗೆ ಪರಿಸ್ಥಿತಿ ಬಿಗ್ಪಡಾಯಿಸಿದೆ.
ಬಳ್ಳಾರಿ ಮುಖಂಡರನ್ನು ಬಿಜೆಪಿ ನಾಯಕರು ನಿಯಂತ್ರಿಸದಿದ್ದರೆ ಅಧಿಕಾರ ಹಸ್ತಾಂತರ ಕನಸಿನ ಮಾತಾಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ. ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿಯಿಂದ ಅಮಾನತಿಗೆ ಒಳಗಾದ ಜನಾರ್ದನರೆಡ್ಡಿ ಜತೆ ಇನ್ನೂ ಆ ಪಕ್ಷದ ನಾಯಕರು ವೇದಿಕೆ ಹಂಚಿಕೊಳ್ಳುತ್ತಾರೆ, ಇದೇ ರೀತಿ ಅಧಿಕಾರ ಹಸ್ತಾಂತರದ ನಂತರವೂ ಬಿಜೆಪಿ ಮುಖಂಡರು ವರ್ತಿಸಿದರೆ ತಮ್ಮ ಪಕ್ಷ ಬೇರೆ ನಿಲುವು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ಚಳಿ ಹುಟ್ಟುವಂತೆ ಮಾಡಿದ್ದಾರೆ.
ತಮ್ಮನ್ನು ಮುಗಿಸಲು ಸಿಎಂ ಸಂಚು ಹೂಡಿದ್ದಾರೆಂದು ರಾಜ್ಯ ಪ್ರವಾಸೋದ್ಯಮ ಸಚಿವ ಶ್ರೀರಾಮುಲು ಮಾಡಿದ ಆಪಾದನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಅವರನ್ನು ಮುಗಿಸುವ ಅಗತ್ಯ ನಮಗಿಲ್ಲ, ಶ್ರೀರಾಮುಲು ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ತನ್ನ ಕೆಲಸ ನಿಭಾಯಿಸುತ್ತದೆ ಎಂದು ಹೇಳಿದ್ದಾರೆ.
ಒಂದು ವರ್ಷದಿಂದ ಸಚಿವ ಸಂಪುಟ ಸಭೆಗೆ ಹಾಜರಾಗದ ಶ್ರೀರಾಮುಲು, ತಮ್ಮ ಸಚಿವ ಹುದ್ದೆಗೆ ರಾಜೀನಾಮೆ ನೀಡುವ ಮಾತನ್ನಾಡಿದ್ದಾರೆ. ಅವರಿಗೆ ಏನೂ ಕಷ್ಟವಾಗದಂತೆ ಹೆಲಿಕಾಪ್ಟರ್‌ನಲ್ಲಿ ಬಂದು ರಾಜೀನಾಮೆ ನೀಡಲಿ ಎಂದು ಗೇಲಿ ಮಾಡಿದ್ದಾರೆ.
|