ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸ್ಥಳೀಯ ಚುನಾವಣೆ: ಶಾಂತಿಯುತ ಮತದಾನ
ರಾಜ್ಯದ 209 ನಗರ ಸ್ಥಳೀಯ ಸಂಸ್ಥೆ ಚುನಾವಣೆ ಶುಕ್ರವಾರ ನಡೆದಿದ್ದು, ಕೆಲವೆಡೆ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಎಲ್ಲೆಡೆ ಶಾಂತಿಯುತ ಮತದಾನ ನಡೆದಿದೆ.

ಹಲವೆಡೆ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ನಾಪತ್ತೆ ಯಾಗಿರುವುದು, ಅಥವಾ ಹೆಸರುಗಳಲ್ಲಿ ವ್ಯತ್ಯಾಸದ ದೂರುಗಳು ದಾಖಲಾಗಿವೆ.

ಮಡಿಕೇರಿ ಹಾಗೂ ಕರಾವಳಿ ಪ್ರದೇಶದಲ್ಲಿ ಮಳೆಯಲ್ಲೂ ಮತದಾರರು ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.

ಚುನಾವಣೆಗೆ ಮುನ್ನವೇ ಸಮ್ಮಿಶ್ರ ಸರ್ಕಾರದ ಅಂಗ ಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಘರ್ಷಣೆ ಸಂಭವಿಸಿ ಉದ್ವಿಗ್ನಗೊಂಡಿದ್ದ ಬಳ್ಳಾರಿಯ 29ನೇ ವಾರ್ಡ್‌ನ ಮತಗಟ್ಟೆಯೊಂದರಲ್ಲಿ ಮತದಾನ ಸ್ಥಗಿತಗೊಳಿಸಲಾಗಿದೆ.

ಬ್ಯಾಲೆಟ್‌ ಪತ್ರದಲ್ಲಿ ಸಿಪಿಐ ಚಿಹ್ನೆ ಬದಲಾಗಿದ್ದು, ಚುನಾವಣಾ ಅಧಿಕಾರಿಗಳು ಮತದಾನವನ್ನು ಸ್ಥಗಿತಗೊಳಿಸಿದ್ದಾರೆ. ಈ ಮತಗಟ್ಟೆಯಲ್ಲಿ ಶನಿವಾರ ಮತದಾನ ನಡೆಯಲಿದೆ.

ಬಳ್ಳಾರಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಆಂಧ್ರಪ್ರದೇಶದಿಂದ ಪೊಲೀಸ್ ಸಿಬ್ಬಂದಿಯನ್ನು ಕರೆಸಲಾಗಿತ್ತು.

ಕೋಲಾರ, ಮಂಡ್ಯ ಹಾಗೂ ಆನೆಕಲ್‌ನಲ್ಲಿ ಗುಂಪು ಘರ್ಷಣೆ ತಪ್ಪಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಮಡಿಕೇರಿಯಲ್ಲಿ ತುಂತುರು ಮಳೆಯಲ್ಲೂ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದಾರೆ.

ಮೈಸೂರಿನ 55ನೇ ವಾರ್ಡಿನಲ್ಲಿ ಜೆಡಿಎಸ್ ಅಭ್ಯರ್ಥಿ ಫಕ್ರುದ್ದೀನ್ ಎಂಬವರ ಮನೆ ಮೇಲೆ 50ರಿಂದ 60 ಜನರ ಗುಂಪು ದಾಳಿ ಮಾಡಿದೆ.ಅವರ ಕಾರನ್ನು ಜಖಂಗೊಳಿಸಿದ ದುಷ್ಕರ್ಮಿಗಳು ಮನೆಯಲ್ಲಿ ಪೀಠೋಪಕರಣಗಳನ್ನು ನಾಶಪಡಿಸಿದ್ದಾರೆ.

ಈ ಕೃತ್ಯಕ್ಕೆ ಸೋಯಬ್ಖಾನ್ ಎಂಬ ಪಕ್ಷೇತರ ಅಭ್ಯರ್ಥಿ ಕಾರಣ ಎಂದು ಪೊಲೀಸರಿಗೆ ದೂರಿನಲ್ಲಿ ತಿಳಿಸಲಾಗಿದೆ. ಕೋಲಾರದ ವಾರ್ಡೊಂದರಲ್ಲಿ ಮತದಾರರ ನೂಕು ನುಗ್ಗಲು ನಿಯಂತ್ರಿಸಲು ಪೊಲೀಸರು ಲಘುಲಾಠಿ ಪ್ರಹಾರ ನಡೆಸಿದಾಗ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ.

ಪರಿಸ್ಥಿತಿಯನ್ನು ಪೊಲೀಸರು ಹತೋಟಿಗೆ ತಂದಿದ್ದಾರೆ. ಶ್ರೀನಿವಾಸಪುರದಲ್ಲಿ ಮತಗಟ್ಟೆಯೊಂದಕ್ಕೆ ನುಗ್ಗಿದ ಗೊಂಪೊಂದು ಮತಪೆಟ್ಟಿಗೆಯಲ್ಲಿ ನೀರು ಸುರಿಯಲು ಪ್ರಯತ್ನಿಸಿದೆ. ಅವರ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮತ್ತಷ್ಟು
ಅಧಿಕಾರದಿಂದ ಕೆಳಗಿಳಿಯುವುದಿಲ್ಲ: ಕುಮಾರಸ್ವಾಮಿ
ಕ್ರಿಕೆಟ್: ಏಕದಿನ ಪಂದ್ಯ ನಾಳೆ ಆರಂಭ
ಅಕ್ಟೋಬರ್ 3ರಂದು ಕುಮಾರಸ್ವಾಮಿ ಪದತ್ಯಾಗ
ಕಸಾಪ ಸಿಬ್ಬಂದಿ ಅನಿರ್ದಿಷ್ಟಾವಧಿ ಧರಣಿ
ನಾಳೆ ಸ್ಥಳೀಯ ಸಂಸ್ಥೆಗಳ ಚುನಾವಣೆ
ಶಾಂತಿ ಸ್ವರೂಪ ಭಟ್ನಾಗರ್ ಪ್ರಶಸ್ತಿಗೆ ಆಯ್ಕೆ