ರಾಜ್ಯದಲ್ಲಿ ಅಧಿಕಾರ ಹಸ್ತಾಂತರ ಕುರಿತು ಈ ವರೆಗೂ ವಿವಿಧ ನಾಯಕರು ವೈವಿಧ್ಯಮಯ ಹೇಳಿಕೆಗಳನ್ನು ನೀಡಿ ರಾಜಕೀಯ ಒತ್ತಡ ಹೇರುತ್ತಿದ್ದರು.
ಆದರೆ ಇವೆಲ್ಲವೂ ಗೌಣವಾಗಿ ಮುಂದಿನ ಇನ್ನೊಂದು ವಾರದಲ್ಲಿ ನಡೆಯುವ ದೇವೇಗೌಡರು ಹಾಗೂ ಬಿಜೆಪಿ ರಾಷ್ಟ್ತ್ರೀಯ ವರಿಷ್ಠರ ನಡುವಣ ಮಾತುಕತೆಯೇ ನಿರ್ಣಾಯಕ ಅಂಶ ಆಗಲಿದೆ.
ಅಧಿಕಾರ ಹಸ್ತಾಂತರಕ್ಕೆ ಜೆಡಿಎಸ್ ನಕಾರಾತ್ಮಕವಾಗಿಲ್ಲ. ಆದರೆ, ಬಳ್ಳಾರಿ ನಾಯಕರಾದ ಜನಾರ್ದನರೆಡ್ಡಿ, ಸಚಿವ ಶ್ರೀರಾಮುಲು, ಕರುಣಾಕರರೆಡ್ಡಿ ಹಾಗೂ ಬಿಜೆಪಿ ಸುರೇಶ್ ಕುಮಾರ್ ಕುರಿತಂತೆ ಜೆಡಿಎಸ್ ವಿಧಿಸುವ ಷರತ್ತುಗಳಿಗೆ ಒಪ್ಪಿದರೆ ಮಾತ್ರ ಬಿಜೆಪಿಗೆ ಅಧಿಕಾರ ಹಸ್ತಾಂತರ ಸುಲಲಿತವಾಗಲಿದೆ.
ಅಧಿಕಾರ ಹಸ್ತಾಂತರ ಕುರಿತು ದೇವೇಗೌಡರು ಬಿಜೆಪಿ ವರಿಷ್ಠರ ಜೊತೆ ಮಾತನಾಡುವ ಮೊದಲು ಇವರ ವಿಷಯವನ್ನು ಪಕ್ಷ ಆಂತರಿಕವಾಗಿ ಬಗೆಹರಿಸಿಕೊಳ್ಳಬೇಕಾಗಿದೆ.
ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಯದೇ ಇರುವಂತೆ ನಮ್ಮ ಶಾಸಕರು ಎಷ್ಟೇ ಒತ್ತಾಯ ಮಾಡಿದರೂ ಕೊಟ್ಟ ಮಾತಿಗೆ ಬದ್ಧನಾಗಿ ನಡೆದುಕೊಳ್ಳುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ತಾವು ರಾಜೀನಾಮೆ ನೀಡುವುದು ನಿಶ್ಚಿತ ಎಂದು ತಿಳಿಸಿದ್ದಾರೆ.
ಬಳ್ಳಾರಿ ಪ್ರಕರಣ ಕುರಿತಂತೆ ಏನನ್ನೂ ಮಾತನಾಡದಿರಲು ಸಚಿವ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿಯವರನ್ನು ಸುಮ್ಮನಾಗಿಸುವಲ್ಲಿ ಬಿಜೆಪಿ ರಾಜ್ಯ ವರಿಷ್ಠರು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ತ್ರೀಯ ವರಿಷ್ಠರಾದ ಯಶವಂತಸಿನ್ಹಾ ಬೆಂಗಳೂರಿಗೆ ಶುಕ್ರವಾರ ಸಂಜೆ ಆಗಮಿಸಲಿದ್ದಾರೆ.
ಅವರು ಎರಡು ಪಕ್ಷಗಳ ನಡುವೆ ಸಂಧಾನ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
|