ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ದೋಸ್ತಿಗಳ ಒಂದುಗೂಡಿಸಲು ಸಿನ್ಹಾ ಕಸರತ್ತು
ಬಳ್ಳಾರಿಯ ಸಚಿವ ಶ್ರೀರಾಮುಲು ಹಾಗೂ ವಿಧಾನಪರಿಷತ್ ಸದಸ್ಯ ಜನಾರ್ದನರೆಡ್ಡಿ ಅವರ ವರ್ತನೆಯಿಂದ ಉದ್ಭವಿಸಿದ ಪರಿಸ್ಥಿತಿಯನ್ನು ಸರಿಪಡಿಸಲು ಬಿಜೆಪಿ ಹೆಣಗಾಡುತ್ತಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ತನ್ನ ಮೇಲೆ ಗುಂಡಿನ ದಾಳಿಗೆ ಕಾರಣ ಎಂಬ ಸಚಿವ ಶ್ರೀರಾಮುಲು ಆರೋಪಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ವಾತಾವರಣ ತಿಳಿಯಾದ ನಂತರವಷ್ಟೇ ಅಧಿಕಾರ ಹಸ್ತಾಂತರದ ಮಾತು ಎಂದು ಹೇಳಿದ್ದು, ಪರಿಸ್ಥಿತಿ ಸರಿಪಡಿಸುವ ಜವಾಬ್ದಾರಿಯನ್ನೂ ಬಿಜೆಪಿ ಮುಖಂಡರ ಮೇಲೆ ಹೊರಿಸಿರುವುದರಿಂದ ಆ ಪಕ್ಷಕ್ಕೆ ಬಿಕ್ಕಟ್ಟು ಎದುರಾಗಿದೆ.

ಈ ಬಿಕ್ಕಟ್ಟನ್ನು ಬಗೆಹರಿಸಲೆಂದೇ ರಾಜ್ಯ ಬಿಜೆಪಿಯ ಉಸ್ತುವಾರಿ ವಹಿಸಿಕೊಂಡಿರುವ ಯಶವಂತ್ ಸಿನ್ಹಾ ದೆಹಲಿಯಿಂದ ಬೆಂಗಳೂರಿಗೆ ಧಾವಿಸಿ ಬಂದಿದ್ದಾರೆ. ಅವರು ಸತತವಾಗಿ ಬಿಜೆಪಿ ಮುಖಂಡರೊಡನೆ ಚರ್ಚೆಯಲ್ಲಿ ಮುಳುಗಿದ್ದಾರೆ.

ಈಗಾಗಲೇ ಬಿಜೆಪಿ ಪದಾಧಿಕಾರಿಗಳೊಂದಿಗೆ ಹಾಗೂ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಅನಂತಕುಮಾರ್ ಹಾಗೂ ಪಕ್ಷದ ರಾಜ್ಯಧ್ಯಕ್ಷ ಸದಾನಂದಗೌಡ ಅವರೊಂದಿಗೆ ಒಂದೆರಡು ಸುತ್ತು ಮಾತುಕತೆ ಮುಗಿಸಿದ್ದಾರೆ.

ಈ ಎಲ್ಲ ವಿದ್ಯಮಾನಗಳನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್‌ ಸಿಂಗ್ ಅವರಿಗೆ ತಿಳಿಸಿದ ನಂತರ ಮುಂದಿನ ಹಂತದ ಕಾರ್ಯಕ್ರಮ ರೂಪುಗೊಳ್ಳಲಿದೆ.

ಈವರೆಗೆ ಜೆಡಿಎಸ್ ವರಿಷ್ಠ ದೇವೇಗೌಡರ ಜತೆ ಮಾತುಕತೆಗೆ ಸಮಯವೇನೂ ನಿಗದಿಯಾಗಿಲ್ಲ. ಆದರೆ ಈಗಾಗಲೇ ದೇವೇಗೌಡರ ಜತೆ ಸಿನ್ಹಾ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಪರಿಸ್ಥಿತಿಗೆ ಕಾರಣರಾದ ಸಚಿವ ಶ್ರೀರಾಮುಲು ಹಾಗೂ ಜನಾರ್ದನರೆಡ್ಡಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಅಥವಾ ಶ್ರೀರಾಮುಲು ಅವರನ್ನೂ ಸಹಾ ಪಕ್ಷದಿಂದ ಅಮಾನತು ಗೊಳಿಸುವುದು ಮಾತ್ರ ಬಿಜೆಪಿಗೆ ಉಳಿದಿರುವ ದಾರಿ.
ಮತ್ತಷ್ಟು
ಅಧಿಕಾರ ಹಸ್ತಾಂತರ ಬಿಕ್ಕಟ್ಟು, ಬಿಜಿಪಿ ಸಚಿವರ ರಾಜೀನಾಮೆ ?
ರಾಜ್ಯ ರಾಜಕಾರಣ: ಸಿನ್ಹಾ, ಗೌಡ ಇಂದು ಚರ್ಚೆ
ಕುಮಾರಸ್ವಾಮಿ ಒಪ್ಪಂದದಂತೆ ನಡೆಯಲಿ: ಯಡಿಯೂರಪ್ಪ
ಒತ್ತುವರಿ ಭೂಮಿ ಹರಾಜಿಗೆ ನೀರಸ ಪ್ರತಿಕ್ರಿಯೆ
ಕಛೇರಿಯಲ್ಲೇ ಐಎಎಸ್ ಅಧಿಕಾರಿ ವಾಸ್ತವ್ಯ
ಐತಿಹಾಸಿಕ ಕಟ್ಟಡಗಳ ಸಂರಕ್ಷಣೆಗೆ ಸಾಲ ಸೌಲಭ್ಯ