ಗ್ರಾಮೀಣ ಪ್ರದೇಶಗಳಲ್ಲದೇ ನಗರ ಪ್ರದೇಶಗಳಲ್ಲೂ ಜಾತ್ಯತೀತ ಪಕ್ಷವನ್ನು ಜನರು ಬೆಂಬಲಿಸಿದ್ದಾರೆ ಎಂಬುದು ಈ ಸ್ಥಳೀಯ ಸಂಸ್ಥೆಗಳ ಫಲಿತಾಂಶದಿಂದ ಖಚಿತವಾಗಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ಗೆ ಹೆಚ್ಚು ಸ್ಥಾನಗಳು ಲಭಿಸುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಪ್ರತಿಕ್ರಿಯಿಸಿದ ಅವರು ಈ ಫಲಿತಾಂಶದಿಂದ ಉತ್ತೇಜನಗೊಂಡು ಮಧ್ಯಂತರ ವಿಧಾನಸಭೆ ಚುನಾವಣೆಗೆ ಹೋಗುವ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜನರ ನೀರೀಕ್ಷೆಯಂತೆ ತಮ್ಮ ಪಕ್ಷ ಆಡಳಿತ ನಡೆಸಿರುವುದೇ ಜನರ ಆಶೀರ್ವಾದಕ್ಕೆ ಕಾರಣ ಎಂದು ವಿಶ್ಲೇಷಿಸಿದ ಅವರು ಈ ಫಲಿತಾಂಶದಿಂದ ನಗರ ಪ್ರದೇಶಗಳಲ್ಲಿ ಜೆಡಿಎಸ್ ಹೊಸನೆಲೆಗಟ್ಟು ಕಂಡುಕೊಂಡಿದೆ ಎಂದು ಹೇಳಿದ್ದಾರೆ.
ಈ ಚುನಾವಣೆಯಲ್ಲಿ ಮಹಿಳೆಯರು ಹಾಗೂ ಅಲ್ಪ ಸಂಖ್ಯಾತರು ತಮ್ಮ ಪಕ್ಷವನ್ನು ಬೆಂಬಲಿಸಿದ್ದರಿಂದಲೇ ತಮಗೆ ಹೆಚ್ಚು ಸೀಟುಗಳು ಲಭ್ಯವಾಗುತ್ತಿವೆ ಎಂದಿದ್ದಾರೆ.
ಮೊದಲಬಾರಿಗೆ ತಮ್ಮ ಪಕ್ಷ ಉತ್ತರ ಕರ್ನಾಟಕದಲ್ಲಿ ಬೇರೂರುವಂತೆ ಆಗಿದೆ ಎಂದು ಹೇಳಿದ್ದಾರೆ. ಅಧಿಕಾರ ಹಸ್ತಾಂತರ ವೈಯಕ್ತಿಕ ನಿರ್ಧಾರದಿಂದ ಆಗುವುದಿಲ್ಲ ಎಂಬುದನ್ನು ಮಾಧ್ಯಮಗಳು ಮನಗಾಣಬೇಕು ಎಂದು ತಿಳಿಸಿದ್ದಾರೆ. ತಮ್ಮ ಪಕ್ಷವನ್ನು ಬೆಂಬಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
|