ಅಧಿಕಾರ ಹಸ್ತಾಂತರ ಕುರಿತಾಗಿ ಮಂಗಳವಾರ ತನ್ನ ನಿರ್ಧಾರ ತಿಳಿಸುವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿರುವಂತೆಯೇ, ಒಪ್ಪಂದ ಪ್ರಕಾರ ಅಧಿಕಾರ ಹಸ್ತಾಂತರ ಆಗಲೇಬೇಕು ಎಂಬ ನಿಲುವು ಹೊಂದಿರುವ ಬಿಜೆಪಿಯ ಸಚಿವರೆಲ್ಲರೂ ತಮ್ಮ ರಾಜೀನಾಮೆ ಪತ್ರಗಳನ್ನು ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಅಧಿಕಾರ ಹಸ್ತಾಂತರಕ್ಕೆ ಹಿಂದೆ-ಮುಂದೆ ನೋಡುತ್ತಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನೇತೃತ್ವದ ಜೆಡಿಎಸ್‌ನ ವರ್ತನೆಯಿಂದ ಬೇಸತ್ತ ಉಪಮುಖ್ಯಮಂತ್ರಿ ಯಡಿಯೂರಪ್ಪ ಅವರು, ಜೆಡಿಎಸ್ ಶಾಸಕರಿಗೆ ಆ ದೇವರು ಆಶೀರ್ವಾದ ನೀಡಲಿ ಎಂದು ಮಾರ್ಮಿಕವಾಗಿ ನುಡಿದ ಬೆನ್ನಿಗೆ ಈ ಬೆಳವಣಿಗೆ ನಡೆದಿದೆ.
ಕುಮಾರ ಸ್ವಾಮಿ ಅವರು ಅಧಿಕಾರ ತ್ಯಜಿಸಲು ನಿರಾಕರಿಸಿದರೆ, ತಾವು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಬಿಜೆಪಿ ಸಚಿವರು ಹೇಳಿರುವುದಾಗಿ ಸುದ್ದಿ ಮೂಲಗಳು ತಿಳಿಸಿವೆ.
ಇಪ್ಪತ್ತು ತಿಂಗಳ ಹಿಂದೆ ನಡೆದ ಒಪ್ಪಂದವನ್ನು ಅನುಷ್ಠಾನಗೊಳಿಸಬೇಕಾದದ್ದು ಆಯಾ ಪಕ್ಷಗಳ ಧರ್ಮ. ಈ ಬಗ್ಗೆ ಹೆಚ್ಚಿನ ಮಾತುಕತೆ ಇಲ್ಲ ಎಂದು ಸಂಧಾನಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ಬಿಜೆಪಿ ವರಿಷ್ಠ ಯಶ್ವಂತ್ ಸಿನ್ಹಾ ಅವರು ಈಗಾಗಲೇ ಕೈಚೆಲ್ಲಿ ಕೂತಿದ್ದಾರೆ.
|