ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿ ಅಂತಿಮ ಗಡುವು ವಿಧಿಸಲಾಗದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಮಧ್ಯರಾತ್ರಿಯವರೆಗೂ ನಡೆದ ಜೆಡಿಎಸ್ ಶಾಸಕಾಂಗ ಪಕ್ಷ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸಚಿವರ ಕ್ರಮವನ್ನು ಟೀಕಿಸಿದರು.
ಬಿಜೆಪಿ ದುಡುಕಿನ ಹೆಜ್ಜೆಯಟ್ಟಿದೆ. ಈ ರೀತಿಯ ದುಡುಕಿನ ಹೆಜ್ಜೆಗೆ ಅದು ಬೆಲೆ ತೆರಬೇಕಾಗುತ್ತದೆ ಎಂದಿದ್ದಾರೆ. ಈ ಮೊದಲು, ಒಪ್ಪಂದದ ಪ್ರಕಾರ ಮಂಗಳವಾರ ಸಂಜೆಯೊಳಗೆ ರಾಜೀನಾಮೆ ಸಲ್ಲಿಸುವಂತೆ ಹಾಗೂ ಈ ಮೂಲಕ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲು ಅವಕಾಶ ನೀಡುವಂತೆ ಕುಮಾರಸ್ವಾಮಿಗೆ ಗಡುವು ವಿಧಿಸಿತ್ತು.
ಬಿಜೆಪಿಗೆ ಅಧಿಕಾರ ಹಸ್ತಾಂತರಿಸುವ ಸಂಬಂಧ ದೆಹಲಿಯಲ್ಲಿ ಅಗಸ್ಟ್ 5ರಂದು ನಡೆಯುವ ಪಕ್ಷಗಳ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರಲು ಜೆಡಿಎಸ್ ಶಾಸಕಾಂಗ ಪಕ್ಷ ಸಭೆ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಮೈತ್ರಿ ಧರ್ಮ ಪಾಲಿಸಲು ಬಿಜೆಪಿ ಪತ್ರ: ಈ ನಡುವೆ, ನಡೆದ ಒಪ್ಪಂದದಂತೆ ಮೈತ್ರಿ ಧರ್ಮ ಪಾಲಿಸಿ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಿ ಎಂಬ ಮನವಿಯ ಪತ್ರವನ್ನು ಬಿಜೆಪಿ ಅಧ್ಯಕ್ಷ ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ರವಾನಿಸಿದ್ದಾರೆ.
ಆರಂಭದಲ್ಲಿ ಮಾಡಿಕೊಂಡ ಒಪ್ಪಂದದಂತೆ 2006ರ ಫೆ.3 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಿರಿ. ತಮ್ಮ ಅವಧಿ ಇಂದಿಗೆ ಪೂರ್ಣಗೊಂಡಿದೆ. ರಾಜ್ಯಪಾಲರಿಗೆ ತ್ಯಾಗಪತ್ರ ನೀಡಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲು ಅನುವು ಮಾಡಿಕೊಡಬೇಕು ಎಂದು ಸಲಹೆ ಮಾಡಿದ್ದಾರೆ.
|