ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ನೀರೀಕ್ಷೆಯಂತೆ ಜಯಗಳಿಸುವುದು ಸಾಧ್ಯವಾಗದ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯನ್ನು ಪುನಾರಚಿಸಲು ಪಕ್ಷದ ರಾಷ್ಟ್ತ್ರೀಯ ವರಿಷ್ಠರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಅಂಗಪಕ್ಷಗಳು ಜಗಳದಲ್ಲಿ ಮುಳುಗಿದ್ದರಿಂದ ಆಡಳಿತದಲ್ಲಿ ಎಡವಿದೆ. ಇಂಥ ಪರಿಸ್ಥಿತಿಯನ್ನು ಬಳಸಿಕೊಂಡು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರಯೋಜನಪಡೆಯುವಲ್ಲಿ ಕಾಂಗ್ರೆಸ್ ಮುಖಂಡರು ವಿಫಲವಾಗಿದ್ದಾರೆ ಎಂಬುದು ಕಾಂಗ್ರೆಸ್ ಹೈಕಮಾಂಡ್ ಅಭಿಪ್ರಾಯವೆಂದು ಮೂಲಗಳು ತಿಳಿಸಿವೆ.
ಹಳ್ಳಿಗಳಿಗೆ ಮಾತ್ರ ಜೆಡಿಎಸ್ ಪ್ರಭಾವ ಸೀಮಿತ, ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕಾಂಗ್ರೆಸ ಪಕ್ಷದ ಬಗೆಗೆ ಮತದಾರರ ಒಲವು ಎಂಬ ಮಿತಿಮೀರಿದ ವಿಶ್ವಾಸದಲ್ಲಿ ಕಾಂಗ್ರೆಸ್ ಮುಖಂಡರು ಇದ್ದಿದ್ದರಿಂದಲೇ ಈ ರೀತಿ ಪರಾಭವ ಎದುರಾಗಿದೆ ಎಂಬುದು ಹೈಕಮಾಂಡ್ ಅಭಿಪ್ರಾಯ. ಈ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರು ಎಲ್ಲಿ ಎಡವಿದ್ದಾರೆ ಎಂಬ ವಿಶ್ಲೇಷಣೆಯೊಂದಿಗೆ ರಾಜ್ಯದ ವಿವಿಧ ಭಾಗಗಳಿಂದು ಕಾಂಗ್ರೆಸ್ ಮುಖಂಡರು ಪತ್ರಗಳನ್ನು ಪಕ್ಷದ ಹೈಕಮಾಂಡ್ಗೆ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.
|