ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿ ರಾಷ್ಟ್ರೀಯ ನಾಯಕರ ತೀರ್ಮಾನವೇ ಅಂತಿಮ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.
ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕೈ ಮೀರಿದೆ ಎಂದು ಹೇಳಿದ್ದಾರೆ.
ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ಕೈಗೊಳ್ಳುವುದು ರಾಷ್ಟ್ರೀಯ ರಾಜಕಾರಣಿಗಳ ಕೈಯಲ್ಲಿದೆ. ಅವರ ತೀರ್ಮಾನವೇ ಅಂತಿಮ. ಈ ನಿಟ್ಟಿನಲ್ಲಿ ಅವರ ತೀರ್ಮಾನಕ್ಕೆ ತಾನು ಬದ್ಧ ಎಂದೂ ಅವರು ಹೇಳಿದರು.
ತಾನೆಂದಿಗೂ ಸರ್ವಾಧಿಕಾರಿಯಲ್ಲ ಎಂಬುದನ್ನು ಸಮರ್ಥಿಸಿದ ಅವರು ಅಧಿಕಾರ ಹಸ್ತಾಂತರ ಆಗುವುದೇ ಇಲ್ಲವೇ ಎಂಬುದರ ಬಗ್ಗೆ ಯಾವುದೇ ಖಚಿತ ಅಭಿಪ್ರಾಯ ವ್ಯಕ್ತಪಡಿಸಲಿಲ್ಲ.
ರಾಷ್ಟ್ರೀಯ ನಾಯಕರು ಯಾರು ? : ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ಕೈಗೊಳ್ಳುವುದು ರಾಷ್ಟ್ರೀಯ ರಾಜಕಾರಣಿಗಳ ಕೈಯಲ್ಲಿದೆ. ಅವರ ತೀರ್ಮಾನವೇ ಅಂತಿಮ ಎಂಬ ದೇವೇಗೌಡರ ಹೇಳಿಕೆ ಹಲವು ಕುತೂಹಲಗಳನ್ನು ಹುಟ್ಟು ಹಾಕಿದೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪಕ್ಷದ ಸೂಪರ್ ಪವರ್. ಅವರ ಮಾತನ್ನು ಪಕ್ಷದಲ್ಲಿ ಯಾರೂ ಉಲ್ಲಂಘಿಸುವಂತಿಲ್ಲ. ಈ ಹಿಂದೆ ಸಿದ್ಧರಾಮಯ್ಯ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಸಂದರ್ಭದಲ್ಲೂ ಅವರೇ ತೀರ್ಮಾನವನ್ನು ಕೈಗೊಂಡಿದ್ದರು. ಆದರೆ ಅಧಿಕಾರ ಹಸ್ತಾಂತರ ವಿಷಯಕ್ಕೆ ಬಂದಾಗ ಈ ರೀತಿಯ ಹೇಳಿಕೆಗಳನ್ನು ನೀಡುವ ಮುಖೇನ ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂಬುದು ರಾಜಕೀಯ ತಜ್ಞರ ಹೇಳಿಕೆ.
ಒಟ್ಟಾರೆ ಅಧಿಕಾರ ಹಸ್ತಾಂತರ ವಾಸ್ತವವಾಗಿ ಇಂದು ನಡೆಯಬೇಕಿತ್ತು. ಆದರೆ ನಡೆಯುವ ಲಕ್ಷಣ ಕಂಡುಬರುತ್ತಿಲ್ಲ. ಇಂದು ಸಂಜೆಯೊಳಗೆ ರಾಜ್ಯ ರಾಜಕೀಯದಲ್ಲಿ ಏನೆಲ್ಲಾ ಬದಲಾವಣೆಗಳು ನಡೆಯಲಿದೆಯೋ ಕಾದು ನೋಡಬೇಕು.
|