ರಾಮಸೇತು ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಆಡಳಿತಾರೂಡ ಪಕ್ಷವನ್ನು ವಜಾಗೊಳಿಸುವುದಕ್ಕೆ ತಾನು ಹಿಂಜರಿಯುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಬಿ.ಎನ್. ಅಗರವಾಲ್ ಹೇಳಿರುವುದರಿಂದ ಅವರನ್ನು ರಾಮಸೇತು ವಿವಾದದ ಪ್ರಕರಣದ ವಿಚಾರಣೆಗೆ ನಿಯುಕ್ತಿ ಮಾಡಬಾರದು ಎಂದು ದ್ರಾವಿಡ ಕಳಗಂ ಪಕ್ಷ ಮುಖ್ಯ ನ್ಯಾಯಾಧೀಶ ಕೆ. ಜಿ. ಬಾಲಕೃಷ್ಣನ್ ಅವರನ್ನು ಕೇಳಿಕೊಂಡಿದೆ.
ಮುಖ್ಯನ್ಯಾಯಾಧೀಶರಿಗೆ ಬರೆದಿರುವ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ದ್ರಾವಿಡ ಕಳಗಂ ಪಕ್ಷದ ಅಧ್ಯಕ್ಷ ಕೆ. ವೀರಮಣಿ ಅವರು, ನ್ಯಾಯ ಪರಿಕಲ್ಪನೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ರಾಮ ಸೇತು ಮತ್ತು ಬಂದ್ ಪ್ರಕರಣದ ವಿಚಾರಣೆಯನ್ನು ಅವರಿಗೆ ವಹಿಸಬಾರದು ಎಂದು ಅವರು ಪತ್ರದ ಮೂಲಕ ಕೇಳಿಕೊಂಡಿದ್ದಾರೆ.ಅಗರವಾಲ್ ಅನಿಸಿಕೆಗಳು, ಎಸ್ ಆರ್ ಬೊಮ್ಮಾಯಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾದ ಹಾಗೂ ಸಂವಿಧಾನಕ್ಕೆ ವ್ಯತಿರಿಕ್ತವಾಗಿವೆ ಎಂದು ಅವರು ಹೇಳಿದರು.
ಕಲಂ 356ರ ಅನ್ವಯ ರಾಜ್ಯ ಸರಕಾರವನ್ನು ರಾಷ್ಟ್ರಪತಿ ಮತ್ತು ಸಂಸತ್ತು ಮಾತ್ರ ಪದಚ್ಯುತಗೊಳಿಸಬಹುದು. ಸರ್ವೋಚ್ಚ ನ್ಯಾಯಾಲಯ, ಸರಕಾರವೊಂದನ್ನು ಪದಚ್ಯುತಗೊಳಿಸುವುದಕ್ಕೆ ಸಲಹೆ ನೀಡಲು ಬರುವುದಿಲ್ಲ. ಕೇಂದ್ರದ ತಪ್ಪಿನಿಂದ ಸರಕಾರ ಪದಚ್ಯುತಗೊಂಡಲ್ಲಿ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೊಗಬಹುದು ಎಂದು ವೀರಮಣಿ ಹೇಳಿದ್ದಾರೆ.
ನ್ಯಾಯಮೂರ್ತಿ ಅಗರವಾಲ್ ಅವರ ಅನಿಸಿಕೆಗಳು ಕೇಂದ್ರ ಮತ್ತು ರಾಷ್ಟ್ರಪತಿ ಅವರ ಅಧಿಕಾರದಲ್ಲಿ ತಲೆತೂರಿಸುವ ಯತ್ನವಾಗಿದ್ದು, ರಾಷ್ಟ್ರಪತಿ ಅವರಿಗೆ ರಾಜ್ಯ ಸರಕಾರವೊಂದರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಲಹೆ ನೀಡುವುದು ಸರಿಯಲ್ಲ ಎಂದು ಅವರು ಮುಖ್ಯನ್ಯಾಯಾಧೀಶ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
|