ಸೂಸುತ್ರವಾಗಿ ಜೆಡಿಎಸ್ ಇನ್ನೂ ಅಧಿಕಾರವನ್ನು ಹಸ್ತಾಂತರಿಸುತ್ತದೆ ಎಂದು ಬಿಜೆಪಿ ನಂಬಿಕೆ ಇರಿಸಿದ್ದು, ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಇಂದು ಪಕ್ಷದ ಸಂಸದೀಯ ಸಮಿತಿಯ ಸಭೆ ನಡೆಯಲಿದ್ದು, ಜೆಡಿಎಸ್ ಮುಖಂಡರೊಂದಿಗೆ ಈ ಕುರಿತು ಮಾತುಕತೆ ನಡೆಸಿರುವ ಹಿರಿಯ ನಾಯಕ ಯಶವಂತ್ ಸಿನ್ಹಾ ಅವರು ಚರ್ಚೆಯ ವಿವರವನ್ನು ಕೇಂದ್ರ ಮಟ್ಟದ ನಾಯಕರಿಗೆ ನೀಡಲಿದ್ದಾರೆ.
ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ನ ರಾಜ್ಯ ಕಾರ್ಯಕಾರಿಣಿ ಸಭೆ ಇಂದು ನಡೆಯಲಿದೆ. ಸಭೆಯಲ್ಲಿ ಅಧಿಕಾರ ಹಸ್ತಾಂತರದ ಕುರಿತು ನಾಯಕರ ಮತ್ತು ಶಾಸಕರ ಅಭಿಪ್ರಾಯಗಳಿಗೆ ಗಮನ ನೀಡುವ ಸಾಧ್ಯತೆ ಇದೆ.
ಶುಕ್ರವಾರ ನವದೆಹಲಿಯಲ್ಲಿ ಜೆಡಿಎಸ್ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ಸೇರಲಿದ್ದು, ಮುಂದೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎನ್ನುವುದರ ಕುರಿತು ನಿರ್ಧರಿಸಲಿದೆ. ಇದೇ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ ಸಮ್ಮಿಶ್ರ ಸರಕಾರದ ನೀತಿಯನ್ನು ಅನುಸರಿಸುತ್ತಿಲ್ಲ ಎಂದು ಜೆಡಿಎಸ್ ಆಪಾದಿಸಿದೆ. ಆದರೆ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ತನ್ನ ಅಂತಿಮ ನಿರ್ಧಾರವನ್ನು ಅದು ಇನ್ನೂ ಪ್ರಕಟಿಸಿಲ್ಲ.
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು, ನಮ್ಮ ಪಕ್ಷದ ನಾಯಕರುಗಳು ಅಕ್ಟೋಬರ್ ಆರರವರೆಗೆ ಜೆಡಿ ಎಸ್ ನಿರ್ಧಾರಕ್ಕೆ ಕಾಯಲಿದ್ದಾರೆ ಎಂದು ಹೇಳಿದ್ದಾರೆ ಅಲ್ಲದೆ, ಗುರುವಾರ ತಮ್ಮೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ದೆವೇಗೌಡ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಕ್ಟೋಬರ್ 6 ಇಲ್ಲವೆ7 ರಂದು, ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದ್ದು ಮಧ್ಯ ಪ್ರವೇಶಿಸಬೇಕು ಎಂದು ಕೇಳಿಕೊಳ್ಳಲಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರು ಹೇಳಿದ್ದಾರೆ
|