ಬಿಜೆಪಿಗೆ ಅಧಿಕಾರ ಹಸ್ತಾಂತರಿಸುವ ವಿವಾದಕ್ಕೆ ಸಂಬಂಧಿಸಿ ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿಯವರ ಮನೆಯಲ್ಲಿ ಜಾತ್ಯತೀತ ಜನತಾ ದಳದ ತುರ್ತು ಸಭೆ ಆರಂಭಗೊಂಡಿದೆ. ಮೈತ್ರಿಪಕ್ಷಗಳ ನಡುವೆ ಬಿಕ್ಕಟ್ಟು ನಡೆದಿರುವ ಹಿನ್ನೆಲೆಯಲ್ಲಿ ಈ ಸಭೆಗೆ ಹೆಚ್ಚಿನ ಮಹತ್ವ ಬಂದಿದೆ.
ಒಂದೆಡೆ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರೇ ಮುಂದುವರಿಯಬೇಕು ಎಂದು ಜೆಡಿಎಸ್ ಪಕ್ಷದ ಬಹುತೇಕ ಶಾಸಕರು ಪಟ್ಟು ಹಿಡಿದಿದ್ದು, ಇದು ಬಿಜೆಪಿಗೆ ಅಧಿಕಾರ ಹಸ್ತಾಂತರವನ್ನು ಸುಲಭವಾಗಿ ನಿರಾಕರಿಸುವ ಒಂದು ತಂತ್ರ ಎಂದೇ ಹೇಳಲಾಗುತ್ತಿದೆ.
ಸಿಎಂ ಅವರ ಗೃಹ ಕಚೇರಿಯಲ್ಲಿ ಸೇರಿರುವ ಪಕ್ಷದ ಎಲ್ಲಾ ಸಚಿವರು ಮತ್ತು ಶಾಸಕರು ಮಹತ್ವದ ನಿರ್ಧಾರಕ್ಕೆ ಇಂದು ಬರಲಿದ್ದಾರೆ ಎಂದು ಭಾವಿಸಲಾಗಿದೆ.
ಈ ನಡುವೆ, ಇಂದು ಸಂಜೆ ನಗರದ ಅರಮನೆ ಮೈದಾನದಲ್ಲಿ ಜೆಡಿಎಸ್ ಪಕ್ಷದ ವಿಜಯೀ ಅಭ್ಯರ್ಥಿಗಳ ಬೃಹತ್ ಸಮಾವೇಶ ನಡೆಯಲಿದ್ದು, ಈ ಸಮಾರಂಭದಲ್ಲಿ ಮಾಜಿ ಪ್ರಧಾನಿ ದೇವೇಗೌಡರೂ ಭಾಗವಹಿಸಲಿದ್ದಾರೆ. ಪಕ್ಷದ ಕಾರ್ಯಕರ್ತರ ಅನಿಸಿಕೆಯ ಆಧಾರದಲ್ಲಿ ಅಧಿಕಾರ ಹಸ್ತಾಂತರದ ಬಗ್ಗೆ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಬಿಜೆಪಿ ಪಕ್ಷದ ಸಭೆ ದೆಹಲಿಯಲ್ಲಿ ಇಂದು ನಡೆಯಲಿದ್ದು, ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿ ಮಹತ್ವದ ಚರ್ಚೆ ನಡೆಯಲಿದೆ. ಈ ಸಭೆಯಲ್ಲಿ ಮಾಜಿ ಪ್ರಧಾನಿ ವಾಜಪೇಯಿ, ಅಡ್ವಾಣಿ, ಸಂಸದ ಅನಂತಕುಮಾರ್ ಭಾಗವಹಿಸಲಿದ್ದು ಭಾವೀ ಮುಖ್ಯಮಂತ್ರಿ ಎಂದು ಬಿಂಬಿತವಾಗಿರುವ ಯಡಿಯೂರಪ್ಪನವರಿಗೂ ವಿಶೇಷ ಆಹ್ವಾನ ನೀಡಲಾಗಿದೆ.
|