ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆಯನ್ನು ನಿರಾಕರಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು,ಬಿಜೆಪಿಯಿಂದ ಬೆಂಬಲದ ಬಿಕ್ಷೆ ನಾನು ಬೇಡುತ್ತಿಲ್ಲ. ಸಮಯ ಬಂದರೆ ತಮ್ಮ ಮತ್ತು ಬಿಜೆಪಿ ನಡುವೆ ಆಗಿರುವ ಅಧಿಕಾರ ಹಂಚಿಕೆ ಒಪ್ಪಂದವನ್ನು ತಾವು ಮುರಿದು ಚುನಾವಣೆಯನ್ನು ಎದುರಿಸಲು ಸಿದ್ದ ಎಂದು ಭಾರತೀಯ ಜನತಾ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಗುರುವಾರ ಕರೆಯಲಾಗಿದ್ದ ಜೆಡಿಎಸ್ ಶಾಸಕರ ಸಭೆಯ ನಂತರ, ಈ ರೀತಿ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷದ ಸಂಸದೀಯ ಸಮಿತಿ ಸಭೆ ನಡೆಯುತ್ತಿದ್ದು, ಸಭೆಗೆ ಬಿ.ಎಸ್. ಯಡಿಯೂರಪ್ಪ ಸಹಿತ ರಾಜ್ಯ ಮಟ್ಟದ ಎಲ್ಲ ನಾಯಕರು ತೆರಳಿದ್ದಾರೆ.
ಭಾರತೀಯ ಜನತಾ ಪಕ್ಷದ ಸಚಿವರುಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ ನಂತರ ಕರ್ನಾಟಕದ ರಾಜಕೀಯದಲ್ಲಿ ಅದರಲ್ಲೂ ಕರ್ನಾಟಕ ಅಭಿವೃದ್ದಿ ರಂಗದಲ್ಲಿ ಬದಲಾವಣೆಯಾಗಿದ್ದು, ಜೆಡಿಎಸ್ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿನಾಕಾರಣ ವಿವಾದ ಹುಟ್ಟು ಹಾಕುತ್ತಿದೆ ಎಂದು ಆಪಾದಿಸುತ್ತಿದೆ.
|