ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ಪಕ್ಷದ ವಿರುದ್ಧ ಮಾಡಿರುವ ಗುರುತರ ಆರೋಪಗಳಿಗೆ ತಮ್ಮ ಪಕ್ಷವು ಮೂರ್ನಾಲ್ಕು ದಿನಗಳಲ್ಲೇ ಉತ್ತರ ನೀಡುವುದೆಂದು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಜೆಡಿಎಸ್ ವಿರುದ್ಧ ಕೂಡ ಗುರುತರ ಆರೋಪಗಳ ಉದ್ದನೆಯ ಪಟ್ಟಿ ನಮ್ಮ ಬಳಿ ಇದೆ ಎಂದು ಯಡಿಯೂರಪ್ಪ ತಿಳಿಸಿದರು.
ಅವರಿಗೆ ಅಧಿಕಾರ ಹಸ್ತಾಂತರ ಇಷ್ಟವಿಲ್ಲದಿದ್ದರೆ ನಾವು ಚುನಾವಣೆಗೆ ಸಿದ್ಧ. ನಾವು ಜನರ ಮುಂದೆ ಹೋಗುತ್ತೇವೆ ಎಂದು ಯಡಿಯೂರಪ್ಪ ಹೇಳಿದರು. ತಾವು ಕಬ್ಬು ಬೆಳೆಗಾರರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಿಲ್ಲ ಎಂದು ಜೆಡಿಎಸ್ ವರಿಷ್ಠ ದೇವೇಗೌಡರ ಆರೋಪವು ರೈತರ ಮುಂದೆ ತಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸುವ ತಂತ್ರವಾಗಿದೆ ಎಂದು ಹೇಳಿದರು.
ಏತನ್ಮಧ್ಯೆ, ಜೆಡಿಎಸ್ ಪಕ್ಷವು ಅಧಿಕಾರ ಹಂಚಿಕೆ ಒಪ್ಪಂದದ ಪ್ರಕಾರ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದಿರುವ ಎಲ್ಲ ಲಕ್ಷಣಗಳು ಕಾಣಿಸುತ್ತಿದೆ. ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಬಲಾಬಲ ಪರೀಕ್ಷೆ ಸಲುವಾಗಿ ಅ.18ರಂದು ವಿಧಾನಸಭೆ ಅಧಿವೇಶನ ಕರೆಯಲು ನಿರ್ಧರಿಸಿದ್ದು, ಇದಕ್ಕೆ ಸಾಕ್ಷಿಯಾಗಿದೆ.
ಅಧಿಕಾರ ಹಸ್ತಾಂತರ ಬಿಕ್ಕಟ್ಟು ಈಗ ದೆಹಲಿಗೆ ವರ್ಗವಾಗಿದ್ದು, ಉಭಯ ನಾಯಕರ ನಡುವೆ ಮಾತುಕತೆಗೆ ನಿಶ್ಚಯಿಸಿರುವ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ತರಾತುರಿಯಿಂದ ಸಚಿವಸಂಪುಟದ ಸಭೆ ಕರೆದರು. ಆದರೆ ಬಿಜೆಪಿ ಸಚಿವರು ಅ.2ರಂದೇ ರಾಜೀನಾಮೆ ನೀಡಿದ್ದರಿಂದ ಈ ಸಭೆಗೆ ಹಾಜರಾಗಲಿಲ್ಲ.
ಕ್ಯಾಬಿನೆಟ್ ಸಭೆಯ ಬಳಿಕ ವರದಿಗಾರರ ಜತೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಅಧಿವೇಶನವನ್ನು ಅಕ್ಟೋಬರ್‌ನಲ್ಲಿ ಇಟ್ಟುಕೊಳ್ಳಲು ಮುಂಚೆಯೇ ನಿರ್ಧರಿಸಲಾಗಿತ್ತು ಎಂದು ಹೇಳಿದರು. ಅಧಿವೇಶನದ ನಿರ್ಧಾರವನ್ನು ರಾಜ್ಯಪಾಲರಿಗೆ ತಿಳಿಸಿ ಅವರ ಅನುಮತಿ ಕೋರಲಾಗುವುದು ಎಂದು ಹೊರಟ್ಟಿ ಹೇಳಿದರು.
|