ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಅಧಿಕಾರ ಹಸ್ತಾಂತರಕ್ಕೆ ಜೆಡಿಎಸ್ ನಕಾರ
PTI
ಬಿಜೆಪಿ ಪಕ್ಷಕ್ಕೆ ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರ ಮಾಡುವುದಿಲ್ಲ ಎಂದು ಶುಕ್ರವಾರ ರಾತ್ರಿ ಜೆಡಿಎಸ್ ಖಡಾಖಂಡಿತವಾಗಿ ಹೇಳುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆಎಳೆದಿದೆ. ಸಚಿವ ಸಂಪುಟದ ಸಭೆಯಲ್ಲಿ ಜೆಡಿಎಸ್ ವಿಶ್ವಾಸಮತ ಯಾಚನೆಗೆ ನಿರ್ಧರಿಸಿದ ಬಳಿಕ ಸಂಭವಿಸಿದ ಈ ಬೆಳವಣಿಗೆ ರಾಜ್ಯವು ಮತ್ತೆ ಜನರೆದುರು ಚುನಾವಣೆಗೆ ನಿಲ್ಲುವ ಸಾಧ್ಯತೆಯನ್ನು ದಟ್ಟವಾಗಿಸಿದೆ.

ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಮಂತ್ರಿ ಎಚ್. ಡಿ. ದೇವೇಗೌಡ ಶುಕ್ರವಾರ ಸಂಜೆ ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಲು ಸಾಧ್ಯವಿಲ್ಲ ಎಂಬ ಜೆಡಿಎಸ್ ರಾಜಕೀಯ ವ್ಯವಹಾರಗಳ ಸಮಿತಿಯ ಭಾವನೆಯನ್ನು ಮುಟ್ಟಿಸಿದರು.

ಇದರಿಂದಾಗಿ 20 ತಿಂಗಳ ಹಿಂದೆ ಉಭಯ ಪಕ್ಷಗಳ ನಡುವೆ ಅಧಿಕಾರ ಹಂಚಿಕೆ ಮಾಡಿಕೊಳ್ಳುವ ಒಪ್ಪಂದವನ್ನು ಮುರಿದ ಜೆಡಿಎಸ್ ವಚನಭಂಗ ಮಾಡಿದಂತಾಗಿದೆ. ದೇವೇಗೌಡರ ಪುತ್ರ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕರ್ನಾಟಕದ ಬಿಜೆಪಿ ನಾಯಕರು ಹತ್ಯೆ ಯತ್ನದ ಪ್ರಕರಣ ದಾಖಲಿಸಿದ್ದಾರೆಂದು ದೂರಿ ದೇವೇಗೌಡರು ರಾಜನಾಥ್ ಸಿಂಗ್ ಜತೆ ಮಾತುಕತೆಗೆ ನಿರಾಕರಿಸಿದ ಒಂದು ವಾರದ ಬಳಿಕ ಅಧಿಕಾರ ಹಸ್ತಾಂತರ ಮಾಡುವುದಕ್ಕೆ ದೇವೇಗೌಡರ ಅಕ್ಷರಶಃ ನಿರಾಕರಣೆ ಹೊರಬಿದ್ದಿದೆ.

WD
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಬಿಜೆಪಿಗೆ ಅಧಿಕಾರ ಹಸ್ತಾಂತರ ಸಾಧ್ಯವಾಗದೆಂಬ ಪಿಎಸಿಯ ಭಾವನೆಗಳನ್ನು ದೇವೇಗೌಡರು ರಾಜನಾಥ ಸಿಂಗ್ ಅವರಿಗೆ ಮನದಟ್ಟು ಮಾಡಿದರೆಂದು ಜೆಡಿಎಸ್ ವಕ್ತಾರ ದಾನಿಶ್ ಅಲಿ ತಿಳಿಸಿದರು. ಪಿಎಸಿ ಶನಿವಾರ ಪುನಃ ಸಭೆ ಸೇರಲಿದ್ದು, ಬಿಜೆಪಿ ಅಧ್ಯಕ್ಷರ ಜತೆ ನಡೆದ ಮಾತುಕತೆಯ ವಿವರಗಳನ್ನು ದೇವೇಗೌಡರು ಅಲ್ಲಿ ನೀಡಲಿದ್ದಾರೆ.

ಏತನ್ಮದ್ಯೆ, ಜೆಡಿಎಸ್ ಏನು ಹೇಳಿತೆಂದು ತಿಳಿಸಲು ರಾಜಾನಾಥ್ ಸಿಂಗ್ ನಿರಾಕರಿಸಿದ್ದು, ಬಿಜೆಪಿ ಸಂಸದೀಯ ಸಮಿತಿ ಸಭೆಯಲ್ಲಿ ಎಲ್ಲ ವಿಷಯವನ್ನು ಮನದಟ್ಟು ಮಾಡುವೆ ಎಂದು ಹೇಳಿದರು. ಬಿಜೆಪಿಗೆ ಅಧಿಕಾರ ಹಸ್ತಾಂತರವಿಲ್ಲವೆಂದು ಗೌಡರು ತಿಳಿಸಿದರೇ ಎಂದು ಪ್ರಶ್ನಿಸಿದಾಗ ಆ ಬಗ್ಗೆ ಉತ್ತರಿಸದೇ ಆ ಪ್ರಶ್ನೆಯನ್ನು ಗೌಡರಿಗೇ ಕೇಳಿ ಎಂದಷ್ಟೇ ಹೇಳಿದರು.

ಶುಕ್ರವಾರ ಸುಮಾರು ಮೂರು ಗಂಟೆಗಳ ಕಾಲ ನಡೆದ ಜೆಡಿಎಸ್‌ನ ಸಂಸದೀಯ ಸಮಿತಿ ಸಭೆಯಲ್ಲಿ ಕರ್ನಾಟಕದ ಪರಿಸ್ಥಿತಿಯನ್ನು ಅವಲೋಕಿಸಿ ಶಾಸಕರು ಮತ್ತು ಪಕ್ಷದ ಕಾರ್ಯಕರ್ತರ ಭಾವನೆಗಳನ್ನು ಬಿಜೆಪಿ ಮುಖಂಡರಿಗೆ ಮುಟ್ಟಿಸುವ ಹೊಣೆಯನ್ನು ಪಕ್ಷದ ಅಧ್ಯಕ್ಷ ದೇವೇಗೌಡರಿಗೆ ವಹಿಸಿದ ಬಳಿಕ ರಾಜನಾಥ್ ಸಿಂಗ್- ದೇವೇಗೌಡರ ಭೇಟಿ ನಡೆಯಿತು.
ಮತ್ತಷ್ಟು
ಜೆಡಿಎಸ್ ಶಾಸಕರ ಅನರ್ಹತೆ ವಿಚಾರಣೆ
ಉಗ್ರರ ದಾಳಿಗೆ ಯೋಧ ಬಲಿ
ರಾಜ್ಯಪಾಲರಿಗೆ ಕಾಂಗ್ರೆಸ್ ದೂರು
ರಾಜಕೀಯ ಬಿಕ್ಕಟ್ಟು : ಜನತೆಯ ಆತಂಕ
ಸಂಪುಟ ಸಭೆಗೆ ಬಿಜೆಪಿ ಸಚಿವರ ಗೈರು
ಬಿಜೆಪಿಗೆ ಹೊಸ ಷರತ್ತು ವಿಧಿಸುವುದಿಲ್ಲ: ದೇವೇಗೌಡ