ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬಿಜೆಪಿ ಬೆಂಬಲ ವಾಪಸ್: ಸರಕಾರ ಪತನ ಕ್ಷಣಗಣನೆ
ಬೆಂಬಲ ಹಿಂತೆಗೆತಕ್ಕೆ ಬಿಜೆಪಿ ನಿರ್ಧಾರ: ನಾಳೆ ಪ್ರತಿಭಟನೆ
"ವಚನಭ್ರಷ್ಟ" ಜೆಡಿಎಸ್ ಅಧಿಕಾರ ಹಸ್ತಾಂತರಿಸಲು ಅಸಹಕಾರ ತೋರಿದ್ದು, ಅದರ ಜತೆಗಿನ ಮೈತ್ರಿ ಮುರಿಯಲು ಬಿಜೆಪಿ ನಿರ್ಧರಿಸಿದೆ. ಒಮ್ಮೆ ಜೆಡಿಎಸ್ ಜತೆ ಕೈಜೋಡಿಸಿ ಕೈ ಸುಟ್ಟುಕೊಂಡಿದ್ದ ಕಾಂಗ್ರೆಸ್, ಮರು ಮೈತ್ರಿಗೆ ನಿರ್ಧಾರ ಮಾಡದೇ ಹೋದಲ್ಲಿ ಇದರೊಂದಿಗೆ ರಾಜ್ಯದಲ್ಲಿ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ.

ಇದರೊಂದಿಗೆ 20 ತಿಂಗಳ ಬಿಜೆಪಿ-ಜೆಡಿಎಸ್ ಮದುವೆ ಮುರಿದುಬೀಳುತ್ತಿದ್ದು, ರಾಜ್ಯ ರಾಜಕೀಯದಲ್ಲಿನ ಬಿಕ್ಕಟ್ಟು ಮತ್ತು ಪ್ರಹಸನಕ್ಕೆ ಅಂಕದ ಪರದೆ ಬೀಳಲಿದೆ.

ಚುನಾವಣೆ ಎದುರಿಸಲು ನಾವು ಸಿದ್ಧ ಎಂದು ಘೋಷಿಸಿರುವ ಬಿಜೆಪಿ, ಭಾನುವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ರಾಜಭವನಕ್ಕೆ ತೆರಳಿ ಬೆಂಬಲ ಹಿಂತೆಗೆದುಕೊಳ್ಳಲಿದೆ.

ಶನಿವಾರ ಬೆಳಿಗ್ಗೆ ದೆಹಲಿಯಲ್ಲಿ ಸಭೆ ಸೇರಿದ್ದ ಬಿಜೆಪಿ ಸಂಸದೀಯ ಮಂಡಳಿಯು ಕೂಡ, ಸರಕಾರದಿಂದ ಹೊರಬರುವ ನಿರ್ಧಾರಕ್ಕೆ ಹಸಿರು ನಿಶಾನೆ ತೋರಿದೆ.

ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದ್ದು, ಅದರಲ್ಲಿ ತೆಗೆದುಕೊಳ್ಳಲಾಗುವ ನಿರ್ಧಾರದ ಮೇಲೆ ರಾಜ್ಯ ರಾಜಕೀಯದ ಭವಿಷ್ಯ ಆಧರಿಸಿದೆ.

ಇದಕ್ಕೆ ಮೊದಲು ಶುಕ್ರವಾರ ರಾತ್ರಿ, ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ಜೆಡಿಎಸ್ ನಿರಾಕರಿಸುವ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸ್ಪಷ್ಟ ಸಂದೇಶ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಈ ನಿರ್ಧಾರ ಹೊರಬಿದ್ದಿದೆ.

ಜೆಡಿಎಸ್‌ನೊಂದಿಗೆ ಅಧಿಕಾರ ನಡೆಸುವುದು ಕನಸಿನ ಮಾತು. ಅದು ವಚನ ಭ್ರಷ್ಟ ಪಕ್ಷ. ಅದರೊಂದಿಗೆ ಅಧಿಕಾರ ಹಸ್ತಾಂತರಗೊಳಿಸುವ ಯಾವುದೇ ಸಂದರ್ಭವೂ ಉದ್ಭವಿಸದು ಎಂದು ಬಿಜೆಪಿ ತಿಳಿಸಿದೆ.

ನಾಳೆ ನಗರದಲ್ಲಿ 25 ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಬೃಹತ್ ಪ್ರತಿಭಟನಾ ಮೆರವಣಿಗೆ ನಗರದಲ್ಲಿ ಆಯೋಜಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಘೋಷಿಸಿದ್ದಾರೆ.

ನಗರದ ಮಹಾತ್ಮಾಗಾಂಧಿ ಪ್ರತಿಮೆ ಬಳಿಯಿಂದ ಆರಂಭಗೊಳ್ಳುವ ಈ ಬೃಹತ್ ಪ್ರತಿಭಟನೆಯ ಬಳಿಕ ಬಿಜೆಪಿಯು ರಾಜಭವನಕ್ಕೆ ತೆರಳಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಳ್ಳಲಿದೆ.

ಈ ಎಲ್ಲಾ ಬೆಳವಣಿಗೆಯ ನಡುವೆ ಕಾಂಗ್ರೆಸ್ ಪಕ್ಷವು ಜೆಡಿಎಸ್ ಜತೆ ಮರು ಮೈತ್ರಿಗೆ ಚಿಂತನೆ ನಡೆಸಿದ್ದು ಹೈಕಮಾಂಡ್ ತೀರ್ಮಾನವೇ ಅಂತಿಮವಾಗಲಿದೆ.
ಮತ್ತಷ್ಟು
ಅಧಿಕಾರ ಹಸ್ತಾಂತರಕ್ಕೆ ಜೆಡಿಎಸ್ ನಕಾರ
ಜೆಡಿಎಸ್ ಶಾಸಕರ ಅನರ್ಹತೆ ವಿಚಾರಣೆ
ಉಗ್ರರ ದಾಳಿಗೆ ಯೋಧ ಬಲಿ
ರಾಜ್ಯಪಾಲರಿಗೆ ಕಾಂಗ್ರೆಸ್ ದೂರು
ರಾಜಕೀಯ ಬಿಕ್ಕಟ್ಟು : ಜನತೆಯ ಆತಂಕ
ಸಂಪುಟ ಸಭೆಗೆ ಬಿಜೆಪಿ ಸಚಿವರ ಗೈರು