ಕರ್ನಾಟಕದ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಳ್ಳಲು ಶನಿವಾರ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಧರಿಸುವ ಮೂಲಕ 20 ತಿಂಗಳ ಕಾಲ ಹಲವಾರು ಎಡರುತೊಡರುಗಳಿಂದ ಸಾಗಿದ ಬಿಜೆಪಿ-ಜೆಡಿಎಸ್ ಬಾಂಧವ್ಯಕ್ಕೆ ಬಿಜೆಪಿ ವಿಚ್ಛೇದನ ಘೋಷಿಸಿದೆ.
20 ತಿಂಗಳ ಆಡಳಿತದ ಬಳಿಕ ಅಧಿಕಾರ ಹಸ್ತಾಂತರ ಮಾಡುವುದಾಗಿ ವಚನ ನೀಡಿದ್ದ ಜೆಡಿಎಸ್ ಈಗ ನಿರಾಕರಿಸುವ ಮೂಲಕ ವಚನಭಂಗ ಮಾಡಿದೆ. ಜೆಡಿಎಸ್ ಅದಿಕಾರ ಹಸ್ತಾಂತರಕ್ಕೆ ಮನ್ನಣೆ ನೀಡದಿರುವುದು ದೊಡ್ಡ ವಂಚನೆಯಾಗಿದ್ದು, ಯಾವುದೇ ಸಂದರ್ಭದಲ್ಲಿ ಬೆಂಬಲ ಹಿಂತೆಗೆದುಕೊಳ್ಳುವುದಾಗಿ ಬಿಜೆಪಿ ನಾಯಕ ವೆಂಕಯ್ಯ ನಾಯ್ಡು ಘೋಷಿಸಿದರು.
ನಾಯ್ಡು ಹೇಳಿಕೆ ಬಳಿಕ, ಹಿರಿಯ ಬಿಜೆಪಿ ನಾಯಕ ಯಶವಂತ ಸಿನ್ಹಾ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ,ಸಮ್ಮಿಶ್ರ ಸರ್ಕಾರದಿಂದ ಹೊರಬರಲು ಬಿಜೆಪಿ ನಿರ್ಧರಿಸಿದ್ದು, ಮಧ್ಯಂತರ ಚುನಾವಣೆಗೆ ದಾರಿ ಕಲ್ಪಿಸಿದೆ ಎಂದು ಹೇಳಿದರು. ದೇವೇಗೌಡ-ರಾಜನಾಥ್ ನಡುವೆ ಶುಕ್ರವಾರ ರಾತ್ರಿ ನಡೆದ ಸಭೆಯ ನೇಪಥ್ಯದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆದಿದೆ.
"ನಾನು ಗೌಡರ ಜತೆ ಸುದೀರ್ಘ ಮಾತುಕತೆ ನಡೆಸಿದ್ದು, ಎಲ್ಲ ವಿಷಯವನ್ನು ಸಂಸದೀಯ ಸಮಿತಿಯ ಎದುರು ಮಂಡಿಸುವೆ ಎಂದು ದೇವೇಗೌಡರನ್ನು ಬೇಟಿ ಮಾಡಿದ ಬಳಿಕ ರಾಜನಾಥ್ ಸಿಂಗ್ ಶುಕ್ರವಾರ ತಿಳಿಸಿದ್ದರು.
ಪಕ್ಷೇತರ ಸಂಸದ ರಾಜೀವ್ ಚಂದ್ರಶೇಖರ್ ನಿವಾಸದಲ್ಲಿ ನಡೆದ ಭೇಟಿಯಲ್ಲಿ 20 ತಿಂಗಳ ಹಿಂದೆ ಮಾಡಿಕೊಂಡ ಅಧಿಕಾರ ಹಂಚಿಕೆ ಒಪ್ಪಂದದ ಅನ್ವಯ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡುವುದಿಲ್ಲ ಎಂದು ದೇವೇಗೌಡ ಅಕ್ಷರಶಃ ತಿಳಿಸಿದ್ದರು. ಬಿಜೆಪಿಗೆ ಬೆಂಬಲ ಹಿಂತೆಗೆದುಕೊಳ್ಳದೇ ಬೇರೆ ಮಾರ್ಗವೇ ಉಳಿದಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿದ್ದವು.
|