ಕರ್ನಾಟಕದ ರಾಜಕೀಯ ವಿದ್ಯಮಾನಗಳು ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ನೆಲೆಯೂರುವುದನ್ನು ತಪ್ಪಿಸುವ ಸಲುವಾಗಿ ಬಿಜೆಪಿಯೇತರ ಪಕ್ಷಗಳ ನಡುವೆ ಹೆಚ್ಚಿನ ಬಾಂಧವ್ಯದ ಬೆಸುಗೆಗೆ ಒಳ್ಳೆಯ ಅವಕಾಶ ಎಂದು ಎಡಪಕ್ಷಗಳು ಶನಿವಾರ ಬಣ್ಣಿಸಿವೆ.
ಕುಮಾರಸ್ವಾಮಿ ಸರ್ಕಾರಕ್ಕೆ ಬೆಂಬಲ ವಾಪಸ್ ತೆಗೆದುಕೊಳ್ಳುವ ಬಿಜೆಪಿಯ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಸಿಪಿಐ ಮತ್ತು ಸಿಪಿಎಂನ ಉನ್ನತ ನಾಯಕರು, ಜಾತ್ಯತೀತ ಪಕ್ಷಗಳು ಜನರ ಸಮಸ್ಯೆಗಳತ್ತ ಹೆಚ್ಚು ಗಮನಹರಿಸಬೇಕೆಂದು ಹೇಳಿದರು.
ಈ ಕುರಿತು ಸಿಪಿಐ ಪ್ರಧಾನಕಾರ್ಯದರ್ಶಿ ಎ.ಬಿ. ಬರ್ಧನ್ ವರದಿಗಾರರ ಜತೆ ಮಾತನಾಡುತ್ತಾ, ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದ ಜೆಡಿಎಸ್ ಕ್ರಮ ಸ್ವಾಗತಾರ್ಹ. ಬಿಜೆಪಿಗೆ ಅಧಿಕಾರ ನೀಡಿದ್ದರೆ ಕೋಮುವಾದಿ ಪಕ್ಷಕ್ಕೆ ದಕ್ಷಿಣ ರಾಜ್ಯದಲ್ಲಿ ಪಾದಾರ್ಪಣೆ ಮಾಡಲು ಆಸ್ಪದವಾಗುತ್ತಿತ್ತು ಎಂದು ಹೇಳಿದರು.
ಬೀಜೆಪಿಯೇತರ ಶಕ್ತಿಗಳು ತಮ್ಮ ನೆಲೆಯನ್ನು ಭದ್ರಪಡಿಸಿಕೊಂಡು ಕೋಮುವಾದಿ ಶಕ್ತಿಗಳನ್ನು ಸಂಘಟಿತ ರೀತಿಯಲ್ಲಿ ವಿರೋಧಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಸಿಪಿಎಂನ ಹಿರಿಯ ನಾಯಕ ಮತ್ತು ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕ ರೂಪ್ ಚಂದ್ ಪಾಲ್ ಹೇಳಿದರು.
ಗಗನಕ್ಕೇರಿದ ಬೆಲೆ, ಪಡಿತರ ವ್ಯವಸ್ಥೆ ಕುಸಿತ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುಂಠಿತ ಮತ್ತು ನಿರುದ್ಯೋಗ ಮತ್ತು ಬಡತನ ಹೆಚ್ಚಳ ಮುಂತಾದ ಜನರ ಸಮಸ್ಯೆಗಳತ್ತ ಗಮನಹರಿಸಲು ಎಲ್ಲ ಜಾತ್ಯತೀತ ಪಕ್ಷಗಳು ತಮ್ಮ ಸಮಯ ಮತ್ತು ಶಕ್ತಿಯನ್ನು ವಿನಿಯೋಗಿಸುತ್ತವೆಂದು ಅವರು ಆಶಿಸಿದರು.
|