ಬಹುಮತ ಕಳೆದುಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತಕ್ಕೆ ಶಾಸನಸಭೆ ಎದುರಿಸಿ ಮುಖಭಂಗಕ್ಕೆ ಒಳಗಾಗುವುದರ ಬದಲಾಗಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಮಾಜಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಆಗ್ರಹಿಸಿದ್ದಾರೆ.
ವಿಶ್ವಾಸಮತಕ್ಕಾಗಿ ಶಾಸನಸಭೆ ಎದುರಿಸಿದರೆ ಅವರು ಮುಖಭಂಗಕ್ಕೆ ಒಳಗಾಗುವುದು ಖಚಿತ.ಆದ್ದರಿಂದ ಅವರು ಗೌರವದಿಂದ ರಾಜೀನಾಮೆ ನೀಡಲಿ ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ ಅವರು,ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡದಿರಲು ಬಿಜೆಪಿ ನಾಯಕರೇ ಪಿತೂರಿ ರೂಪಿಸಿದ್ದರು ಎಂದು ಮುಖ್ಯಮಂತ್ರಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿ,ಬಿಜೆಪಿಯಲ್ಲಿರುವ ಒಗ್ಗಟ್ಟನ್ನು ಒಡೆಯಲು ಮುಖ್ಯಮಂತ್ರಿ ಇಂತಹ ಮಾತುಗಳನ್ನು ಆಡುತ್ತಿದ್ದಾರೆ.ಒಂದು ವೇಳೆ ಅವರಿಗೆ ಅಧಿಕಾರ ಹಸ್ತಾಂತರ ಮಾಡುವ ಮನಸ್ಸಿದ್ದಿದ್ದರೆ,ಮಾಡಿಯೇ ಮಾಡುತ್ತಿದ್ದರು.ಇಂತಹ ಅಪದ್ಧ ಹೇಳಿಕೆ ನೀಡುತ್ತಿರಲಿಲ್ಲ ಎಂದು ಖಾರವಾಗಿ ಟೀಕಿಸಿದರು.
ದೇವೇಗೌಡ ಮತ್ತು ಕುಮಾರಸ್ವಾಮಿ ಅಧಿಕಾರ ದಾಹದಿಂದ ಪ್ರಜಾಸತ್ತೆಯನ್ನು ಬುಡಮೇಲು ಮಾಡಲು ಹೊರಟಿದ್ದಾರೆ.ತಾವು ಮಾಡಿದ ತಪ್ಪನ್ನು ಸಮರ್ಥಿಸಲು ಮತ್ತೊಬ್ಬರತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.ಇಂತಹ ಕ್ರಮಗಳನ್ನು ಬಿಟ್ಟು ಅವರು ರಾಜ್ಯದ ಜನರ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.
ಮಂಗಳೂರು ಕೋಮುಗಲಭೆಯ ಸಂದರ್ಭದಲ್ಲಿ ಮೃತರ ಮನೆಗೆ ನಾನು ಹೋಗಲಿಲ್ಲ ಎಂದು ದೇವೇಗೌಡರು ಹೇಳಿರುವುದು ಸತ್ಯಕ್ಕೆ ದೂರ.ನಾನು ಮತ್ತು ಕುಮಾರಸ್ವಾಮಿ ಒಟ್ಟಿಗೆ ಹೋಗಿದ್ದೇವು.ಮಾಜಿ ಪ್ರಧಾನಿಯ ಇಂತಹ ಮಾತು ವಿಷ ಬೀಜ ಬಿತ್ತುವ ಕೆಲಸ.ತಮ್ಮ ಮಾತನ್ನು ಅವರು ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ.ಅದರಲ್ಲಿ ವಿಫಲವಾದರೆ ಅವರು ರಾಜ್ಯದ ಜನರ ಕ್ಷಮೆ ಕೇಳಲಿ ಎಂದು ಯಡಿಯೂರಪ್ಪ ಸವಾಲು ಹಾಕಿದರು.
|