ಬಿಜೆಪಿಗೆ ಜೆಡಿಎಸ್ ಮಾಡಿರುವ ಅನ್ಯಾಯ, ದ್ರೋಹದ ಬಗ್ಗೆ ಮನೆ ಮನೆಗೆ ತೆರಳಿ ಪ್ರಚಾರ ಮಾಡುವುದಾಗಿ ತಿಳಿಸಿರುವ ಮಾಜಿ ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಂದೆ ನಡೆಯುವ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಬಹುಮತ ಲಭಿಸಿ ತಾವೇ ಯಾರ ಬೆಂಬಲವೂ ಪಡೆಯದೇ ಸರ್ಕಾರ ರಚನೆ ಮಾಡುವ ನಿಟ್ಟಿನಲ್ಲಿ ಜನರು ಆಶೀರ್ವಾದ ಮಾಡಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ರಾಜ್ಯಪಾಲರ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, 20 ತಿಂಗಳ ಹಿಂದೆ ತಮ್ಮ ಬೆಂಬಲ ಪಡೆದಾಗ 20 ತಿಂಗಳ ಅವಧಿಯ ನಂತರ ಬಿಜೆಪಿಗೆ ಅಧಿಕಾರವನ್ನು ಹಸ್ತಾಂತರಿಸುವುದಾಗಿ ವಚನ ನೀಡಿದ ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರು ತಮಗೆ ನೀಡಿದ ಭರವಸೆಯನ್ನು ಈಡೇರಿಸದಿರುವುದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ದೇವೇಗೌಡರ ಕುಟುಂಬ ಆಡಳಿತ ಮುಂದುವರಿಯಬೇಕೆಂಬ ಹಂಬಲದಿಂದಲೇ ಅವರು ಈ ರೀತಿ ವರ್ತಿಸಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದರು.
ಇದಕ್ಕೆ ಮೊದಲು, ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಯ ಎಲ್ಲಾ ಶಾಸಕರು ಭಾನುವಾರ ರಾಜಭವನಕ್ಕೆ ತೆರಳಿ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ತಾವು ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿರುವುದನ್ನು ಖಚಿತಪಡಿಸಿರುವ ಪತ್ರವನ್ನು ರಾಜ್ಯಪಾಲರಿಗೆ ಹಸ್ತಾಂತರಿಸಿದರು.
ಇದರೊಂದಿಗೆ ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರವು ಅಧಿಕೃತವಾಗಿ ಅಲ್ಪಮತಕ್ಕೆ ಇಳಿಯಿತು.
|