ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಯಡಿಯೂರಪ್ಪ ವಿರುದ್ಧ ಬಿಜೆಪಿಯಲ್ಲೇ ಸಂಚು: ಸಿಎಂ
ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯಪಾಲರು ಅವಕಾಶ ನೀಡಿದರೆ ಬಿಜೆಪಿ ನಾಯಕರ ಹುನ್ನಾರವನ್ನು ಬಹಿರಂಗಪಡಿಸುವುದಾಗಿ ತಿಳಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಅವರು ಮುಂದಿನ ಮುಖ್ಯಮಂತ್ರಿಯಾಗಬಾರದು ಎಂದು ಬಿಜೆಪಿಯ ಹಲವಾರು ಮುಖಂಡರು ಹಾಗೂ ಶಾಸಕರು ಸಂಚು ನಡೆಸಿರುವ ವಿಷಯ ತಮಗೆ ಗೊತ್ತಿದೆ ಎಂದಿದ್ದಾರೆ.

ತಾವು ಹುಟ್ಟಿನಿಂದಲೂ ಯಾರನ್ನೂ ಜಾತಿಯಿಂದ ಗುರುತಿಸಿಲ್ಲ, ಹಾಗಾಗಿ ವೀರಶೈವರಿಗೆ ಅಧಿಕಾರ ದೊರೆಯಬಾರದೆಂಬ ಉದ್ದೇಶ ತಮಗಿಲ್ಲ ಎಂದು ಒಂದು ಪ್ರಶ್ನೆಗೆ ಉತ್ತರ ನೀಡಿದರು. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗದಂತೆ ತಡೆಯಲು ಬಿಜೆಪಿಯ ಹಲವಾರು ಮುಖಂಡರು ತಮ್ಮನ್ನು ಭೇಟಿ ಮಾಡಿ ಕೋರಿದ್ದರು ಎಂದರು.

ತಾವು ಎಂದೂ ಅಧಿಕಾರ ಹಸ್ತಾಂತರ ಮಾಡುವುದಿಲ್ಲ ಎಂದು ಹೇಳಿಲ್ಲ ಎಂದ ಅವರು, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸದ ಆ ಪಕ್ಷದ ರಾಷ್ಟ್ರೀಯ ಮುಖಂಡರು ಈ ಸಂದರ್ಭದಲ್ಲಿ ಬಂದು ತಮ್ಮೊಂದಿಗೆ ಚರ್ಚೆ ನಡೆಸದೆ ಅಧಿಕಾರ ಹಸ್ತಾಂತರವಾಗದಂತೆ ತಡೆದರು ಎಂದು ತಿಳಿಸಿದರು.

ಸದನದಲ್ಲಿ ತಮಗೆ ಈ ವಿಷಯ ಕುರಿತು ಚರ್ಚೆ ನಡೆಸುವುದು ತಮ್ಮ ಉದ್ದೇಶವಾಗಿದ್ದು, ಅದು ಈಡೇರದಿದ್ದರೆ ರಾಜ್ಯದ ಜನರಿಗೆ ಅಧಿಕಾರ ಹಸ್ತಾಂತರವಾಗದಿರುವುದಕ್ಕೆ ಬಿಜೆಪಿ ಪಾತ್ರವೇನು ಎಂಬುದನ್ನು ಮನದಟ್ಟು ಮಾಡಿಕೊಡುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದರು.

ತಮ್ಮ ನೇತೃತ್ವದ ಸರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಎಂಎಲ್ಎಗಳ ಕುದುರೆ ವ್ಯಾಪಾರಕ್ಕೆ ಮುಂದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಧಾನಸಭೆಯಲ್ಲೇ ಬಿಜೆಪಿ ನೀಡಿದ ಕಿರುಕುಳ ಹಾಗೂ ತನ್ನ ನೋವನ್ನು ವಿವರಿಸಲು ರಾಜ್ಯಪಾಲರು ಅವಕಾಶ ಮಾಡಿಕೊಡುವ ನಂಬಿಕೆ ತಮಗಿದೆ ಎಂದರು.

ಅಧಿಕಾರ ಹಸ್ತಾಂತರವಾಗದಿರುವುದಕ್ಕೆ ತಾವೇನೂ ಅಪರಾಧವೆಸಗಿಲ್ಲ ಎಂಬುದನ್ನು ಜನರ ಮುಂದೆ ಸಾಬೀತು ಪಡಿಸುವುದೇ ತಮ್ಮ ಉದ್ದೇಶ ಎಂದು ಹೇಳಿದರು.
ಮತ್ತಷ್ಟು
'ದ್ರೋಹ' ವಿರುದ್ಧ ಮನೆಮನೆ ಪ್ರಚಾರ: ಯಡಿಯೂರಪ್ಪ
ಸಿಎಂ ರಾಜೀನಾಮೆಗೆ ಆಗ್ರಹ
ಬಿಜೆಪಿ ಸಚಿವರುಗಳ ರಾಜೀನಾಮೆ ಸ್ವೀಕಾರ
ಚುನಾವಣೆಗೆ ಜೆಡಿಎಸ್ ಒಲವು
29ರಂದು ನೈಸ್ ಅರ್ಜಿ ವಿಚಾರಣೆ
ನಾವು ಪಾಠ ಕಲಿತೆವು: ಯಶವಂತ ಸಿನ್ಹಾ