ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಉದ್ಘಾಟಕರನ್ನು ಕೊನೆ ಕ್ಷಣದಲ್ಲಿ ಬದಲಿಸಲಾಗಿದೆ. ಈ ಹಿಂದೆ ನಿಗದಿಯಾಗಿದ್ದಂತೆ ಸಿದ್ಧಗಂಗಾ ಮಠದ ಡಾ. ಶಿವಕುಮಾರಸ್ವಾಮಿಜಿ ಅವರ ಬದಲಿಗೆ ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಈ ಬಾರಿಯ ದಸರಾ ಉತ್ಸವ ಉದ್ಘಾಟಿಸಲಿದ್ದಾರೆ.
ಸರ್ಕಾರದ ಕೋರಿಕೆ ಮೇರೆಗೆ ದಸರಾ ಉತ್ಸವ ಉದ್ಘಾಟಿಸಲು ಒಪ್ಪಿದ್ದ ಶಿವಕುಮಾರಸ್ವಾಮೀಜಿ ಅವರು ಅನಾರೋಗ್ಯದ ನಿಮಿತ್ತ ದೂರ ಪ್ರಯಾಣ ಮಾಡಲು ಸಾಧ್ಯವಿಲ್ಲದ ಕಾರಣ ಉತ್ಸವದಲ್ಲಿ ಪಾಲ್ಗೊಳ್ಳಲಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಅವರಿಗೆ ಪತ್ರ ಬರೆದಿದ್ದರು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಅ. 12ರಂದು ಬೆಳಗ್ಗೆ 8.30ಕ್ಕೆ ನಡೆಯುವ ಸಮಾರಂಭದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ದಸರಾ ಉತ್ಸವ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೈಸೂರು ದಸರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳ ಮಾಹಿತಿಗಾಗಿ 9900801678 ಹಾಗೂ 9900804061ನ್ನು ಸಂಪರ್ಕಿಸಬಹುದು.
ಕಟ್ಟೆಚ್ಚರ: ದಸರೆಗೆ ನಕ್ಸಲ್ ಹಾಗೂ ಉಗ್ರಗಾಮಿಗಳ ಬೆದರಿಕೆ ಇರುವುದರಿಂದ ಭಾರಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ದಸರಾ ಉತ್ಸವದಲ್ಲಿ ವಿದೇಶಗಳಿಂದ ಪ್ರವಾಸಿಗರು ಆಗಮಿಸಲಿರುವ ಹಿನ್ನೆಲೆಯಲ್ಲಿ ಸೌಜನ್ಯಯುತ ನಡವಳಿಕೆ ಕುರಿತು ಪೊಲೀಸರಿಗೆ ವಿಶೇಷ ತರಬೇತಿ ನೀಡಲಾಗಿದೆ.
ಮೈಸೂರಿನ ಪ್ರತಿ ಪ್ರಮುಖ ರಸ್ತೆ ಹಾಗೂ ಬಡಾವಣೆಗಳಲ್ಲಿ ಸಿಸಿಟಿವಿ ಅಳವಡಿಸಲಾಗುವುದು. ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವವರು ಆಹ್ವಾನ ಪತ್ರಿಕೆ ಹೊಂದಿರುವುದು ಕಡ್ಡಾಯ. ಈ ಎಲ್ಲಾ ಆಹ್ವಾನ ಪತ್ರಿಕೆಗಳು ಬಾರ್ಕೋಡ್ ಹೊಂದಿರುತ್ತವೆ.
|