ಒಪ್ಪಂದದಂತೆ ಬಿಜೆಪಿಗೆ ಅಧಿಕಾರ ಹಸ್ತಾಂತರಿಸದ ಜೆಡಿಎಸ್ ವರ್ತನೆ ಬಗ್ಗೆ ಶನಿವಾರ ರಾಜ್ಯವ್ಯಾಪಿ ಟೀಕೆ, ಪ್ರತಿಭಟನೆ ವ್ಯಕ್ತವಾಗಿದ್ದು, ಕೆಲವೆಡೆ ಜೆಡಿಎಸ್ ಪಾಳಯದಿಂದಲೂ ವಿರೋಧ ವ್ಯಕ್ತವಾಗಿದೆ.
ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಬೆಂಗಳೂರು ನಗರ ಜಿಲ್ಲಾ ವೀರಶಯವ ಮಹಾಸಭಾ ಘೋಷಿಸಿದೆ.
ಬಿಜೆಪಿಯಿಂದ ಬೆಂಬಲ ಪಡೆದು 20 ತಿಂಗಳು ಅಧಿಕಾರ ನಡೆಸಿ ಇದೀಗ ಕುಂಟು ನೆಪ ಹೇಳಿ ಯಡಿಯೂರಪ್ಪ ಅವರಿಗೆ ಅಧಿಕಾರ ಬಿಟ್ಟುಕೊಡದಿರುವುದು ಅನ್ಯಾಯ ಎಂದು ಮಹಾಸಭಾದ ಅಧ್ಯಕ್ಷ ಎಂ.ಎಸ್. ನಟರಾಜ್ ಆರೋಪಿಸಿದ್ದಾರೆ.
ಬಸವಧರ್ಮೀಯರಾಗಿರುವ ಯಡಿಯೂರಪ್ಪ ಅವರಿಗೆ ಆಗಿರುವ ಅನ್ಯಾಯದ ವಿರುದ್ಧ ವೀರಶೈವ-ಲಿಂಗಾಯತ ಸಮಾಜ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಚಾಮರಾಜನಗರದಲ್ಲಿ ಸಿಎಂ ಮತ್ತು ದೇವೇಗೌಡರ ಪ್ರತಿಕೃತಿಗಳನ್ನು ದಹನಮಾಡಲಾಗಿದೆ. ಚಾಮರಾಜನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರೂ ಭಾಗವಹಿಸಿ ಅಚ್ಚರಿ ಮೂಡಿಸಿದ್ದಾರೆ.
ಸೋಮವಾರವೂ ಬೃಹತ್ ಪ್ರತಿಭಟನೆ ನಡೆಯಲಿದೆ. ವಾಗ್ದಾನದಂತೆ ಅಧಿಕಾರ ಹಸ್ತಾಂತರ ಮಾಡದಿರುವ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿರುವ ಅರಕಲಗೂಡು ತಾಲೂಕಿನ ಶಿರದನಹಳ್ಳಿ ವ್ಮಠದ ಬಸವಲಿಂಗಾಚಾರ್ಯ ಸ್ವಾಮೀಜಿ, ಮಾತಿಗೆ ತಪ್ಪಿದ ದೇವೇಗೌಡರ ನಡೆವಳಿಕೆ ರಾಜ ಕಾರಣವನ್ನು ಅಪವಿತ್ರಗೊಳಿಸಿದೆ.
ಬಸವಣ್ಣ ಹುಟ್ಟಿದ ನಾಡಿನಲ್ಲಿ ಇಂಥ ರಾಜಕೀಯ ವಾತಾವರಣ ಸೃಷ್ಟಿಯಾಗಿರುವುದು ನಿಜಕ್ಕೂ ದುರದೃಷ್ಟಕರ ಎಂದು ವಿಷಾದಿಸಿದ್ದಾರೆ.
ಕುಮಾರಸ್ವಾಮಿ ಹಾಗೂ ದೇವೇಗೌಡರ ವರ್ತನೆ ಸರಿಯಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ನಂಜುಂಡಸ್ವಾಮಿ ಬಣದ ಉಪಾಧ್ಯಕ್ಷ ಚಾಮರಸ ಮಾಲಿಪಾಟಿಲ್ ಖಂಡಿಸಿದ್ದಾರೆ.
|