ಹಲವಾರು ನಾಟಕೀಯ ಬೆಳವಣಿಗೆಗಳ ಬಳಿಕ ಕರ್ನಾಟಕದಲ್ಲಿ ಜೆಡಿಎಸ್ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡುವುದೆಂಬ ಊಹಾಪೋಹಗಳು ದಟ್ಟವಾಗಿ ಹರಡಿದೆ. ಈ ಕುರಿತು ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ,ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜೆಡಿಎಸ್ ಶಾಸಕರು ಮತ್ತು ಬಿಜೆಪಿ ಶಾಸಕರು ಸೋಮವಾರ ಸಂಜೆ ಭೇಟಿ ಮಾಡಿ ಚರ್ಚಿಸಿದರೆಂದು ತಿಳಿದುಬಂದಿದೆ.
ಇದರಿಂದಾಗಿ ಎರಡು ಪಕ್ಷಗಳು ಪುನಃ ಜತೆಗೂಡಿ ಸರ್ಕಾರ ರಚಿಸುವ ಎಲ್ಲ ಲಕ್ಷಣಗಳು ಗೋಚರಿಸಿವೆ.ಇದಕ್ಕೆ ಮುನ್ನ, ಕುಮಾರಸ್ವಾಮಿ ಅವರು ಬಹುಮತ ಕಳೆದುಕೊಂಡಿರುವುದರಿಂದ ರಾಜೀನಾಮೆ ನೀಡುವಂತೆ ರಾಜ್ಯಪಾಲರು ಆದೇಶ ನೀಡಿದ್ದರಿಂದ ತಾವು ಸಂಜೆ ವೇಳೆ ರಾಜೀನಾಮೆ ಸಲ್ಲಿಸುವುದಾಗಿ ಕುಮಾರಸ್ವಾಮಿ ಹೇಳಿದ್ದರು.
ಅಧಿಕಾರ ಹಸ್ತಾಂತರಕ್ಕೆವಿಫಲವಾದ ಜೆಡಿಎಸ್‌ಗೆ ಬಿಜೆಪಿ ಬೆಂಬಲ ಬೆಂಬಲ ವಾಪಸು ತೆಗೆದುಕೊಂಡ ಬಳಿಕ, ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅಂತಿಮ ವಾಕ್ಯವನ್ನು ಕಾಂಗ್ರೆಸ್ ಕೂಡ ಉಚ್ಚರಿಸಿತ್ತು,. ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ಕಾಂಗ್ರೆಸ್ ಒತ್ತಾಯಿಸಿತ್ತು. ರಾಜ್ಯಪಾಲರಾದ ರಾಮೇಶ್ವರ್ ಠಾಕುರ್ ಸಂವಿಧಾನ ತಜ್ಞರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರಲ್ಲದೇ ಮುಖ್ಯಮಂತ್ರಿಯನ್ನೂ ಸಂಪರ್ಕಿಸಿದ್ದರು.
ರಾಜ್ಯಪಾಲರ ಜತೆ ನಡೆಸಿದ ಚರ್ಚೆಯ ವಿವರಗಳನ್ನು ಬಹಿರಂಗಪಡಿಸಲು ಕುಮಾರಸ್ವಾಮಿ ನಿರಾಕರಿಸಿದರೂ ರಾಜ್ಯಪಾಲರು ನೀಡಿದ ಹಿತವಚನದಿಂದ ಕುಮಾರಸ್ವಾಮಿ ಮನಸ್ಸು ಪರಿವರ್ತನೆ ಆಗಿರಬಹುದೇ ಅಥವಾ ರಾಷ್ಟ್ರಪತಿ ಆಳ್ವಿಕೆ ಹೇರಬಹುದೆಂಬ ಆತಂಕದಿಂದ ತರಾತುರಿಯಲ್ಲಿ ಬಿಜೆಪಿ ಜತೆ ಮಾತುಕತೆಗೆ ಮುಂದಾಗಿರಬಹುದೇ ಎಂಬ ಊಹಾಪೋಹಗಳು ದಟ್ಟವಾಗಿ ಕೇಳಿಬರುತ್ತಿವೆ.
|