ಅಧಿಕಾರದಿಂದ ಕೆಳಗಿಳಿಯುವ ಕೊನೆ ಘಳಿಗೆಯಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದು ಬಿಜೆಪಿಗೆ ಅಧಿಕಾರ ಹಸ್ತಾಂತರಿಸಬೇಕೆಂಬ ನಿರ್ಧಾರ ತೆಗೆದುಕೊಂಡರೂ ರಾಜ್ಯವನ್ನು ರಾಷ್ಟ್ರಪತಿ ಆಡಳಿತದಿಂದ ತಪ್ಪಿಸಲು ಸಾಧ್ಯವಾಗಲಿಲ್ಲ.
ಆದರೆ ಧರ್ಮಯಾತ್ರೆಗೆ ಸಿದ್ಧವಾದ ಬಿಜೆಪಿಗೆ ಮರುಮೈತ್ರಿಯ ಚಾಕೊಲೆಟ್ ತೋರಿದ್ದೇಕೆ ಎಂಬುದರ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ.
ಯಾವುದೇ ಕಾರಣಕ್ಕೂ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಲೇಬಾರದು ಎಂಬ ತೀರ್ಮಾನ ಕೈಗೊಂಡಿದ್ದ ಜೆಡಿಎಸ್‌ನಲ್ಲಿ ಏಕೆ ಹೀಗಾಯ್ತು ಎಂಬುದೇ ಈಗ ಎಲ್ಲರ ಮುಂದಿನ ಮಿಲಿಯನ್ ಡಾಲರ್ ಪ್ರಶ್ನೆ.
ಸೋಮವಾರ ಮಧ್ಯಾಹ್ನದವರೆಗೂ ಯಾವುದೇ ಸೂಚನೆಯಿಲ್ಲದೆ, ನಂತರ ದಿಢೀರ್ ಆಗಿ ಮರು ಹೊಂದಾಣಿಕೆ ಕುರಿತ ವದಂತಿ ಹಬ್ಬಿತು.
ಜೆಡಿಎಸ್ ವಿರುದ್ಧ ತುಮಕೂರಿನಲ್ಲಿ ಧರ್ಮಯುದ್ಧ ಆರಂಭಿಸಿದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ನಂತರ ಯಡಿಯೂರಪ್ಪ ಹಠಾತ್ತನೆ ಬೆಂಗಳೂರಿಗೆ ವಾಪಸಾಗಿದ್ದು ಮತ್ತು ಬಿಜೆಪಿ ಶಾಸಕರ ಜೊತೆ ಗುಪ್ತ ಸಮಾಲೋಚನೆ ನಡೆಸಿದ್ದ ವದಂತಿಗೆ ರೆಕ್ಕೆಪುಕ್ಕ ಕಟ್ಟಿದಂತಾಯಿತು.
ಮರು ಹೊಂದಾಣಿಕೆಗೆ ಒಪ್ಪಿಕೊಂಡ ಕುಮಾರಸ್ವಾಮಿ ಯಾರದಾದರೂ ಒತ್ತಡಕ್ಕೆ ಕಟ್ಟುಬಿದ್ದರೆ? ಪಕ್ಷದ ವರಿಷ್ಠ ಹಾಗೂ ತಂದೆ ಎಚ್.ಡಿ.ದೇವೇಗೌಡರನ್ನು ಮತ್ತೊಮ್ಮೆ ಧಿಕ್ಕರಿಸಿ ಬಿಜೆಪಿ ಜೊತೆ ಕೈಜೋಡಿಸುವ ದಿಟ್ಟ ನಿಲುವ ಕೈಗೊಳ್ಳಲು ಇದ್ದ ಅನಿವಾರ್ಯತೆ ಏನಿತ್ತು? ಎಂಬೆಲ್ಲಾ ಪ್ರಶ್ನೆಗಳಿಗೆ ಕಾರಣಗಳು ಹೀಗಿರಬಹುದು.
ಪಕ್ಷದ ಬಹುತೇಕ ಶಾಸಕರು ಅಧಿಕಾರ ಹಸ್ತಾಂತರದ ಪರವಾಗಿದ್ದರು. ಚುನಾವಣೆ ಎದುರಿಸುವುದು ಅವರಿಗೆ ಸಾಧ್ಯವಿಲ್ಲದ ಮಾತಾಗಿತ್ತು.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನ ವಂಚಿತರನ್ನಾಗಿ ಮಾಡಿದ್ದರಿಂದ ರಾಜ್ಯದ ಜನತೆಯಲ್ಲಿ ಜೆಡಿಎಸ್ ಬಗ್ಗೆ ತಿರಸ್ಕಾರದ ಭಾವನೆ ಮೂಡಿದ್ದು. ಸಚಿವರಾದ ಚೆಲುವರಾಯಸ್ವಾಮಿ ಮತ್ತಿತರರು ಹಸ್ತಾಂತರದ ಪರವಾಗಿದ್ದದ್ದು.
ಹಸ್ತಾಂತರ ಆಗದಿರುವುದನ್ನು ವಿರೋಧಿಸಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಸ್ಥಾನಕ್ಕೆ ಮಹಿಮಾ ಪಟೇಲ್ ಮತ್ತು ವಿಜಯ ಸಂಕೇಶ್ವರ್ ರಾಜೀನಾಮೆ ನೀಡಿದ್ದು.
|