ಹೇಗಾದರೂ ಮಾಡಿ ಮುಖ್ಯಮಂತ್ರಿ ಗದ್ದುಗೆಯನ್ನು ಅಲಂಕರಿಸಬೇಕೆಂಬ ಬಿ.ಎಸ್.ಯಡಿಯೂರಪ್ಪ ಅವರ ಉತ್ಕಟ ಆಕಾಂಕ್ಷೆ ಮತ್ತೆ ಚಿಗುರೊಡೆದಿದೆ. ರಾಜ್ಯದ ಮೇಲೆ ರಾಷ್ಟ್ತ್ರಪತಿ ಆಡಳಿತವನ್ನು ಹೇರುವ ಮೂಲಕ ಕೇಂದ್ರ ಸರ್ಕಾರ ಕಳೆದ ಕೆಲ ದಿನಗಳ ನೀರೀಕ್ಷೆಯನ್ನು ನಿಜವಾಗಿಸಿದೆ.
ಆದರೆ, ವಿಧಾನಸಭೆಯನ್ನು ವಿಸರ್ಜನೆ ಮಾಡಿಲ್ಲ. ಅಮಾನತು ಸ್ಥಿತಿಯಲ್ಲಿರಿಸುವ ಮೂಲಕ ಶಾಸನ ಸಭೆಯನ್ನು ಜೀವಂತವಾಗಿ ಇಡಲಾಗಿದೆ. ಅರ್ಥಾತ್ ರಾಜಕೀಯ ದೊಂಬರಾಟಗಳಿಗೆ ಬಾಗಿಲು ಇನ್ನೂ ತೆರೆದಿದೆ. ರಾಜ್ಯಪಾಲರಾದ ರಾಮೇಶ್ವರ್ ಠಾಕೂರ್ ಅವರು ಮಾಡಿರುವ ಶಿಫಾರಸ್ಸನ್ನು ಕೇಂದ್ರ ಸಚಿವ ಸಂಪುಟ ಸಭೆ ವಿಮರ್ಶಿಸಿ ಅಂಗೀಕಾರ ನೀಡಿದೆ. ಈ ಕೇಂದ್ರ ಸಚಿವ ಸಂಪುಟ ನಿರ್ಧಾರಕ್ಕೆ ರಾಷ್ಟ್ತ್ರಪತಿ ಪ್ರತಿಭಾ ಪಾಟೀಲ್ ಸಹಿ ಹಾಕಿದ್ದಾರೆ. ಹೀಗಾಗಿ ಸರ್ಕಾರ ರಚನೆಗೆ ಅಗತ್ಯವಿರುವ ಶಾಸಕರ ಸಂಖ್ಯಾಬಲವನ್ನು ಸಾಬೀತು ಪಡಿಸುವ ಪಕ್ಷ ಸರ್ಕಾರವನ್ನು ರಚನೆ ಮಾಡಬಹುದಾಗಿದೆ.
ತಮಗೆ ಅಧಿಕಾರ ಹಸ್ತಾಂತರ ಮಾಡದವರನ್ನು ಕ್ಷಮಿಸುವುದಿಲ್ಲ. ನಂಬಿಕೆ ದ್ರೌಹ ಮಾಡಿದವರನ್ನು ಶಿಕ್ಷಿಸಿ. ನಿಮ್ಮ ವಿಶ್ವಾಸಕ್ಕೆ ಬಿಜೆಪಿ ದ್ರೌಹ ಮಾಡುವುದಿಲ್ಲ ಎಂದು ಪ್ರಚಾರ ಮಾಡುತ್ತಿದ್ದ ಮಾಜಿ ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಗ ಬದಲಾಯಿಸಿದ್ದಾರೆ.
ದೋಸ್ತಿ ಖತಂ ಆದನಂತರ ಚೆಲುವರಾಯಸ್ವಾಮಿ ನೀಡಿದ ಸಂದೇಶದಿಂದ ಧರ್ಮಯುದ್ಧದಿಂದ ಹಿಂತಿರುಗಿಬಂದ ಯಡಿಯೂರಪ್ಪ ಅವರಿಗೆ ನಿರಾಶೆ ಕಾದಿತ್ತು. ಮತ್ತೆ ಧರ್ಮಯುದ್ಧಕ್ಕೆ ಮರಳಿದ ಯಡಿಯೂರಪ್ಪ ಹೊಸ ವರಸೆ ಆರಂಭಿಸಿದ್ದಾರೆ.
ಅದೆಂದರೆ ಜೆಡಿಎಸ್ ಹಾಗೂ ಆ ಪಕ್ಷದ ಮುಖಂಡರಾದ ದೇವೇಗೌಡ ಹಾಗೂ ಕುಮಾರಸ್ವಾಮಿಯವರನ್ನು ಟೀಕಿಸದಿರುವುದು. ಇದಕ್ಕೆ ಕಾರಣ ವಿಧಾನ ಸಭೆ ವಿಸರ್ಜಿಸದಿರುವುದು, ಹಾಗೂ ಜೆಡಿಎಸ್ ಬಾಹ್ಯ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಪ್ರಯತ್ನ ನಡೆದಿರುವುದು.
ಈಗ ಯಡಿಯೂರಪ್ಪ ಅವರು ಕಾಂಗ್ರೆಸ್ ಅನ್ನು ಟೀಕಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಈ ಪರಿಸ್ಥಿತಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಪ್ರಚಾರ ಮಾಡುತ್ತಿದ್ದಾರೆ.
|