ಜನತಾಪರಿವಾರದ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಸ್. ಆರ್.ಬೊಮ್ಮಾಯಿ ಬುಧವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ಅವರ ನಿಧನದಿಂದ ಜನತಾಪರಿವಾರದ ಇನ್ನೊಂದು ಕೊಂಡಿ ಕಳಚಿಕೊಂಡಿದೆ.
ಇತ್ತೀಚೆಗೆ ಅವರಿಗೆ ಹೃದಯಾಘಾತ ಸಂಭವಿಸಿ ತೆರೆದ ಹೃದಯದ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.ಶ್ವಾಸಕೋಶದ ತೊಂದರೆಯಿಂದ ಅವರನ್ನು ವೊಕಾರ್ಟ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳು ಅವರಿಗೆ ಇದ್ದಾರೆ.
ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿದ ಬಳಿಕ 1988ರಂದು ರಾಜ್ಯದ 11ನೇ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದರು. ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಬೊಮ್ಮಾಯಿ ಕೇಂದ್ರ ಸಚಿವ ಸಂಪುಟದಲ್ಲಿ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದರು. ಬಳಿಕ ಹೆಗಡೆ ಜತೆಯಲ್ಲಿ ಅಖಿಲಭಾರತ ಪ್ರಗತಿಪರ ಜನತಾದಳ ಎಂಬ ಹೊಸ ಪಕ್ಷದ ಉದಯಕ್ಕೆ ಕಾರಣರಾದರು.
ರಾಜ್ಯಸರ್ಕಾರ ಸುವರ್ಣ ಕರ್ನಾಟಕ ಸ್ಮರಣೆಗಾಗಿ ನೀಡಿದ ಏಕೀಕರಣ ಪ್ರಶಸ್ತಿಗೆ ಬೊಮ್ಮಾಯಿ ಕೂಡ ಪಾತ್ರರಾಗಿದ್ದಾರೆ, ಬೊಮ್ಮಾಯಿ ಅವರ ಅಂತ್ಯಕ್ರಿಯೆಯು ಶುಕ್ರವಾರ ಬೆಳಿಗ್ಗೆ ಹುಬ್ಬಳ್ಳಿಯ ಅಮರಗೋಳದಲ್ಲಿ ನಡೆಯಲಿದೆ.
ಬೊಮ್ಮಾಯಿ ಅವರ ಸರ್ಕಾರವನ್ನು ವಜಾ ಮಾಡಿದಾಗ ಅವರು ಸುಪ್ರೀಂಕೋರ್ಟ್‌ನಲ್ಲಿ ಛಲ ಬಿಡದ ತ್ರಿವಿಕ್ರಮನಂತೆ ಹೋರಾಡಿ ಗೆದ್ದರು. ಇದರಿಂದಾಗಿ ರಾಜ್ಯಸರ್ಕಾರಗಳನ್ನು ಮನಸ್ಸಿಗೆ ಬಂದಂತೆ ಕೇಂದ್ರಸರ್ಕಾರ ವಜಾ ಮಾಡಲು ಹಿಂಜರಿಯುವಂತಾಗಿದೆ.
|