ಬುಧವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾದ ಎಸ್.ಆರ್.ಬೊಮ್ಮಾಯಿ ಅವರ ಪಾರ್ಥಿವ ಶರೀರಕ್ಕೆ ಹುಬ್ಬಳ್ಳಿ ಸಮೀಪದ ಅಮರಗೋಳದಲ್ಲಿ ಶುಕ್ರವಾರ ಅಂತ್ಯಕ್ರಿಯೆ ನಡೆಯಲಿದೆ.
ಸೋಮಪ್ಪ ರಾಯಪ್ಪ ಬೊಮ್ಮಾಯಿ ಎಂದೆಂದಿಗೂ ರಾಜ್ಯವಷ್ಟೇ ಅಲ್ಲ, ರಾಷ್ಟ್ತ್ರ ಮಟ್ಟದಲ್ಲೂ ನೆನಪಿನಲ್ಲಿ ಉಳಿಯುತ್ತಾರೆ. ಏಕೆಂದರೆ, ಬೊಮ್ಮಾಯಿ ಅವರು ತಮ್ಮ ಸರ್ಕಾರ ವಜಾ ಮಾಡಿದಾಗ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದರು.
ಛಲಬಿಡದೆ ಹೋರಾಡಿ ಜಯಗಳಿಸಿದರು. ಇದರ ಪರಿಣಾಮವೇ ಈಗ ಕೇಂದ್ರ ಸರ್ಕಾರ ಮನಸೋ ಇಚ್ಚೆ ವಿಧಾನಸಭೆಗಳನ್ನು ವಿಸರ್ಜಿಸುವಂತಿಲ್ಲ. ಬೊಮ್ಮಾಯಿ ಅವರಿಗೆ ಈ ತೀರ್ಪಿನಿಂದ ಯಾವುದೇ ಲಾಭವಾಗಿಲ್ಲ.
ಆದರೆ ಅದರಿಂದ ಪ್ರಜಾ ಪ್ರಭುತ್ವವೇ ಗಟಿ ್ಟಯಾಯಿತು. ಇದು ಬೊಮ್ಮಾಯಿ ಕೊಟ್ಟುಹೋಗಿರುವ ಕೊಡುಗೆ. ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಆರ್.ಟಿ. ನಗರದ ಬೊಮ್ಮಾಯಿ ಅವರ ನಿವಾಸಕ್ಕೆ ಇಡಲಾಗಿದೆ.
ಅವರ ನಿವಾಸಕ್ಕೆ ತೆರಳಿ ರಾಜ್ಯಪಾಲ ರಾಮೇಶ್ವರ್ ಠಾಕೂರ್, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಂತಾದ ಗಣ್ಯರು ಅಂತಿಮ ದರ್ಶನ ಪಡೆದರು.
ಆ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲ ರಮೇಶ್ವರ ಠಾಕೂರ್ ಅವರು ನೈತಿಕ ಮೌಲ್ಯಗಳಿಗಾಗಿ, ತಾವು ನಂಬಿದ ಸಿದ್ದಾಂತಗಳಿಗಾಗಿ ಬೊಮ್ಮಾಯಿ ಅವರು ಹೋರಾಡಿದರು ಎಂದು ಅಂತಿಮ ನಮನ ಸಲ್ಲಿಸಿದರು.
ಕಾಂಗ್ರೆಸ್ ವಿರುದ್ಧ ಹೋರಾಟದಲ್ಲಿ ತೊಡಗಿದ್ದ ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ಹಾಗೂ ಈಗ ಬೊಮ್ಮಾಯಿ ಅವರ ನಿಧನದೊಂದಿಗೆ ಆ ತಂಡದಲ್ಲಿ ಉಳಿದ ತಾವು ಏಕಾಂಗಿ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ. ಮೃದುಮನಸ್ಸಿನ ಬೊಮ್ಮಾಯಿ ಅವರು ತಮ್ಮಂಥ ಯುವ ರಾಜಕಾರಣಿಗಳಿಗೆ ಮಾರ್ಗದರ್ಶಕರಾಗಿದ್ದರು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಯಾಗಿದ್ದ ರಾಮಕೃಷ್ಣ ಹೆಗಡೆ ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ರಾಜೀನಾಮೆ ನೀಡಿದನಂತರ ಜನತಾ ಪಕ್ಷ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಯಾದ ಬೊಮ್ಮಾಯಿ 1988ರ ಆಗಸ್ಟ್ 13ರಂದು ರಾಜ್ಯದ 11ನೇ ಮುಖ್ಯಮಂತ್ರಿ ಯಾದರು.
ಪಕ್ಷದಲ್ಲಿನ ಭಿನ್ನಮತದಿಂದಾಗಿ ಅವರು 251 ದಿನಗಳ ಕಾಲ ಮಾತ್ರ ಮುಖ್ಯಮಂತ್ರಿ ಯಾಗಿದ್ದರು. ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಬೊಮ್ಮಾಯಿ ಕೇಂದ್ರ ಸಚಿವ ಸಂಪುಟದಲ್ಲಿ ಮಾನವ ಸಂಪನ್ಮೂಲ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ವಿಧಾನಪರಿಷತ್ತಿನ ಸದಸ್ಯರು.
ಇನ್ನೊಬ್ಬ ಪುತ್ರ ಮಹೇಶ್ ಕೈಗಾರಿಕೋದ್ಯಮಿ. ಬೊಮ್ಮಾಯಿ ಅವರಿಗೆ ಗಿರಿಜಾ ಮತ್ತು ಉಮಾ ಎಂಬ ಪುತ್ರಿಯರಿದ್ದಾರೆ.
|