ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಶುಕ್ರವಾರ ಆರಂಭವಾಗಿದೆ. ಅ. 12ರಿಂದ 21ರ ವರೆಗೆ ನಡೆಯಲಿರುವ ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ಶುಕ್ರವಾರ ಬೆಳಗ್ಗೆ ಸುಮಾರು 9 ಗಂಟೆಗೆ ಆದಿಚುಂಚನಗಿರಿ ಮಠಾಧೀಶರಾದ ಶ್ರೀ ಬಾಲಗಂಗಾಧರನಾಥ ಸ್ವಾಮಿಜಿ ಚಾಲನೆ ನೀಡಿದರು. ಇದಕ್ಕೆ ಮೊದಲು ಶ್ರೀಗಳಿಗೆ ಪೂರ್ಣಕುಂಭದೊಡನೆ ಸ್ವಾಗತ ನೀಡಲಾಯಿತು.ಆ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಅವರು ರಾಜ್ಯದ ಜನತೆಗೆ ತಾಯಿ ಚಾಮುಂಡೇಶ್ವರಿ ಉತ್ತಮ ಬುದ್ದಿ ನೀಡುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನ ವೈಭವದ ದಸರೆಯ ರಸಕ್ಷಣಗಳನ್ನು ಮೆಲುಕು ಹಾಕಿದರು. ರಾಜ್ಯದಲ್ಲಿ ರಾಜಕೀಯ ಗೊಂದಲ ಹಾಗೂ ರಾಷ್ಟ್ತ್ರಪತಿ ಆಡಳಿತವಿದ್ದರೂ ಅಧಿಕಾರಿಗಳು ದಸರಾ ಮಹೋತ್ಸವದ ಯಾವುದೇ ಸಂಪ್ರದಾಯಗಳಿಗೆ ಚ್ಯುತಿ ಬರದಂತೆ ಆಚರಿಸಲು ಸಕಲ ಸಿದ್ಧತೆಗಳನ್ನು ನಡೆಸಿದ್ದಾರೆ. ಈ ರೀತಿ ರಾಷ್ಟ್ತ್ರಪತಿಆಡಳಿತದಲ್ಲಿ ದಸರ ಆಚರಣೆಗೊಳ್ಳುತ್ತಿರುವುದು ಇದು ಎರಡನೆ ಬಾರಿ.
1989ರಲ್ಲಿ ಜನತಾದಳದ ಆಂತರಿಕ ಭಿನ್ನಮತದಿಂದ ಬೊಮ್ಮಾಯಿ ಅವರ ಸರ್ಕಾರ ಪತನಗೊಂಡಾಗ ದಸರೆ ನಡೆದಿತ್ತು.
ಅಂದಿನ ರಾಜ್ಯಪಾಲ ವೆಂಕಟಸುಬ್ಬಯ್ಯ ಅವರು ಜಂಬೂ ಸವಾರಿ ಉದ್ಘಾಟಿಸಿದ್ದರು.
ಇದೇ ಸಂದರ್ಭದಲ್ಲಿ ಮಡಿಕೇರಿಯಲ್ಲಿ ದಸರಾಗೆ ಶಕ್ತಿ ದೇವತೆಗಳ ಕರಗ ಪೂಜೆ ಮೂಲಕ ಚಾಲನೆ ನೀಡಲಾಗಿದೆ. ನಾಲ್ಕು ಕರಗಗಳು 9 ದಿನ ನಗರ ಪ್ರದಕ್ಷಿಣೆ ನಡೆಸಲಿವೆ.
ಹೇಮಗುಡ್ಡ ದಸರಾ: ಕೊಪ್ಪಳ ಜಿಲ್ಲೆ ಗಂಗಾವತಿ ಹೇಮಗುಡ್ಡದಲ್ಲಿ ಮೈಸೂರು ದಸರಾ ರಿತಿ ಉತ್ಸವ ಸಮ್ಮುಖದಲ್ಲಿ ನಡೆಯಲಿದೆ.
ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳ 16ನೇ ದಸರಾ ದರ್ಬಾರ್ ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದಿದೆ. ದಸರಾ ದರ್ಬಾರನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೆರವೇರಿಸಿದ್ದಾರೆ.
ಶೃಂಗೇರಿಯಲ್ಲಿ 9 ದಿನವೂ ಶಾರದಾಂಬೆಗೆ ವಿಶೇಷ ಪೂಜೆ ಅಲಂಕಾರ, ಸ್ವರ್ಣ ಸಿಂಹಾಸನದಲ್ಲಿ ಶ್ರೀಗಳ ಪಾದುಕೆ ಇಟ್ಟು ಪದ್ಧತಿ ಆಚರಿಸಲಾಗುತ್ತಿದೆ.
|