ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ವಚನಭಂಗ ಕ್ರಮದಿಂದ ರೋಸಿ ಹೋದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಪುತ್ರ ಮಹಿಮಾ ಪಟೇಲ್ ಜೆಡಿಎಸ್ ಪಕ್ಷಕ್ಕೆ ಗುಡ್‌ಬೈ ಹೇಳಿದ್ದು, ಸುವರ್ಣಯುಗ ಎಂಬ ನೂತನ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.
ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಪತ್ರವನ್ನು ಪಕ್ಷದ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ಅವರಿಗೆ ನೀಡಿದ್ದಾರೆ. ಈ ಮಧ್ಯೆ, ರಾಜ್ಯದಲ್ಲಿ ಪ್ರಸ್ತುತ ರಾಜಕೀಯ ಪರಿಸ್ಥಿತಿಗೆ ಯಾರು ಕಾರಣರು ಎನ್ನುವ ಪರಸ್ವರ ಆರೋಪಗಳೊಂದಿಗೆ ಮುಂದಿನ ದಾರಿ ಕಂಡುಕೊಳ್ಳುವ ಚಟುವಟಿಕೆಯಲ್ಲಿ ರಾಜಕೀಯ ಮುಖಂಡರು ನಿರತರಾಗಿದ್ದಾರೆ.
ಅಧಿಕಾರ ಹಸ್ತಾಂತರ ಮಾಡದೇ ಇರುವುದಕ್ಕಾಗಿ ಜನರ ಕ್ಷಮೆಯಾಚಿಸುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿರುವುದು ಜನರನ್ನು ಮರುಳು ಮಾಡುವ ತಂತ್ರ ಎಂದು ಮಾಜಿ ಉಪ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಟೀಕಿಸಿದ್ದಾರೆ. ಒಬ್ಬ ಕೊಲೆ ಮಾಡಿ ನಂತರ ತಪ್ಪಾಗಿದೆ ಎಂದರೆ ನ್ಯಾಯಾಲಯ ನೇಣು ಹಾಕದೆ ಬಿಡುಗಡೆ ಮಾಡಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಸದ್ಯಕ್ಕೆ ನಿರ್ಮಾಣವಾಗಿರುವ ಗೊಂದಲದಿಂದ ಮುಕ್ತವಾಗಲು ಪ್ರಮುಖ ಪಕ್ಷಗಳ ನಾಯಕರು ಪತ್ರಿಕಾ ಗೋಷ್ಠಿ ಕರೆದು ಮಧ್ಯಂತರ ಚುನಾವಣೆಗೆ ಸಿದ್ಧ ಎಂದು ಘೋಷಿಸುವಂತೆ ಅವರು ಒತ್ತಾಯಿಸಿದ್ದಾರೆ.
ಜೆಡಿಎಸ್‌ನೊಂದಿಗೆ ಮೈತ್ರಿ ಪ್ರಸ್ತಾಪ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಪ್ರಸಕ್ತ ರಾಜಕೀಯ ಬಿಕ್ಕಟ್ಟು ನಿವಾರಣೆಗೆ ಚುನಾವಣೆಯೊಂದೇ ಮದ್ದು ಎಂದು ಹೇಳಿದ್ದಾರೆ.
ಪಕ್ಷದ ಹೈಕಮಾಂಡ್‌ನಿಂದಲೂ ಮರುಮೈತ್ರಿ ಕುರಿತ ಯಾವುದೇ ಸೂಚನೆ ಬಂದಿಲ್ಲ ಎಂದು ತಿಳಿಸಿದ್ದಾರೆ.
ಒಂದುಕಡೆ ಅಧಿಕಾರದ ಲಾಲಸೆ ಇಲ್ಲ ಎಂದು ಹೇಳುವ ಬಿಜೆಪಿ ನಾಯಕರು ಮತ್ತೊಂದೆಡೆ ಅಧಿಕಾರ ಸಿಗುತ್ತದೆ ಎಂಬ ನಂಬಿಕೆಯಿಂದ ದೂರದ ಊರಿನಿಂದ ಓಡೋಡಿ ಬೆಂಗಳೂರಿಗೆ ಬರುತ್ತಾರೆ ಎಂದರೆ ಅಧಿಕಾರಕ್ಕಾಗಿ ಯಾವ ಮಟ್ಟಕ್ಕೆ ಇಳಿಯುತ್ತಾರೆ ಎಂಬುದಕ್ಕೆ ಇದು ಸಾಕ್ಷಿ ಎಂದು ಗೇಲಿ ವ್ಯಂಗ್ಯ ಮಾಡಿದ್ದಾರೆ.
|