ಬೆಂಗಳೂರು ಪುಸ್ತಕೋತ್ಸವ 2007 ವಿದ್ಯುಕ್ತವಾಗಿ ಅರಮನೆ ಮೈದಾನದಲ್ಲಿ ಇಂದು ಆರಂಭವಾಯಿತು. ಸಮಾರಂಭದ ಚಾಲನೆಯನ್ನು ಹಿರಿಯ ಸಾಹಿತಿ ಹಾಗೂ ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಕಂಬಾರರವರು ನೆರವೇರಿಸಿದರು.
ಅಕ್ಟೋಬರ್ 12 ರಿಂದ 21 ರ ತನಕ ಅರಮನೆ ಮೈದಾನದಲ್ಲಿ ನಡೆಯಲಿರುವ ಪುಸ್ತಕ ಮಹಾಮೇಳದ ಮೊದಲನೆಯ ದಿನವೇ ಜನರನ್ನು ಸೂಜಿಗಲ್ಲಿನಂತೆ ತನ್ನೆಡೆ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ಐದನೇ ವರ್ಷದ ಬೆಂಗಳೂರು ಪುಸ್ತಕೋತ್ಸವ 2007ರ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷ ಬಲರಾಂ ಸಾಧ್ವಾನಿ ಮಾತನಾಡುತ್ತಾ ಈ ಬಾರಿ ಅತಿ ಹೆಚ್ಚು ಕನ್ನಡ ಪ್ರಕಾಶಕರ ಭಾಗವಹಿಸುವಿಕೆಯಿಂದ ಬೆಂಗಳೂರು ಪುಸ್ತಕೋತ್ಸವಕ್ಕೆ ಮಹತ್ವ ಬಂದಿದೆ.
ಕೇವಲ ಕನ್ನಡ ಪ್ರಕಾಶಕರಷ್ಟೇ ಅಲ್ಲದೇ ಅನ್ಯ ಭಾಷಾ ಪ್ರಕಾಶಕರ ಪ್ರೋತ್ಸಾಹವೂ ದ್ವಿಗುಣವಾಗಿರುವುದು ಮತ್ತೂ ವಿಶೇಷವಾಗಿದೆ. ನಮ್ಮ ಈ ಪ್ರಯತ್ನವನ್ನು ಬೆಂಗಳೂರಿನ ಲಕ್ಷಾಂತರ ಪುಸ್ತಕ ಪ್ರೇಮಿಗಳು ಸದುಪಯೋಗಿಸಿಕೊಳ್ಳಬಲ್ಲರು ಎಂಬುದಕ್ಕೆ ಇಂದಿಲ್ಲಿ ನೆರೆದಿರುವ ಜನ ಸಮೂಹವೇ ಸಾಕ್ಷಿ ಎಂದರು.
ಸಮಾರಂಭದಲ್ಲಿ ಕಾರ್ಯಕ್ರಮ ಸಂಯೋಜಕ ಜೆ. ಉಲ್ಲಾಸ್ ಕುಮಾರ್, ಕ್ಲಬ್ ಕ್ಲಾಸ್‌ನ ಕಾರ್ಯಕ್ರಮ ನಿರ್ದೇಶಕ ಬಿ. ಎಸ್. ರಘುರಾಂ, ಬೆಂಗಳೂರು ಪುಸ್ತಕ ಮಾರಾಟಗಾರರ ಸಂಘದ ಕಾರ್ಯದರ್ಶಿ ದೇವರು ಭಟ್ ಹಾಗೂ ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕರಾದ ಪಿ.ವೈ. ರಾಜೇಂದ್ರರವರು ಉಪಸ್ಥಿತರಿದ್ದರು.
ವಿಶೇಷ ಆಕರ್ಷಣೆ : ಜನಪದ ಗಾಥೆಯನ್ನು ನೆನಪಿಸುವಂತಹ ಡೊಳ್ಳು ಕುಣಿತ, ನಂದಿ ದ್ವಜ ನೆರೆದಿದ್ದ ಬೃಹತ್ ಜನ ಸಮೂಹವನ್ನು ಸೆಳೆದಿತ್ತು. ಪುಸ್ತಕ ಮಳಿಗೆಯ ಮುಂದೆ ಪ್ರದರ್ಶಿಸಲಾಗಿದ್ದ ವಿಶ್ವ ಕಪ್ ಇಪ್ಪತ್ತು ಇಪ್ಪತ್ತರ ಅವಿಸ್ಮರಣೀಯ ಅಂಶಗಳನ್ನೊಳಗೊಂಡ ಪ್ರತಿಕೃತಿ ನೋಡುಗರ ಗಮನಸೆಳೆದಿತ್ತು.
ಪುಸ್ತಕ ಮೇಳದ ಮಾರಾಟ ಮಳಿಗೆಗಳಲ್ಲಿ ಅಲ್ಲಲ್ಲಿ ನೆರೆದಿದ್ದ ಡೊಳ್ಳು ಕುಣಿತ ವೇಷಧಾರಿಗಳು ಪುಸ್ತಕದ ಪುಟಗಳನ್ನು ವಿಸ್ಮಯರಾಗಿ ತಿರುವು ಹಾಕುತ್ತಿದ್ದ ದೃಶ್ಯ ರಂಜನೀಯವಾಗಿತ್ತು.
|