ಸಮ್ಮಿಶ್ರ ಸರ್ಕಾರದ ಅಧಿಕಾರ ಹಸ್ತಾಂತರ ವಿಷಯದಲ್ಲಿ ವಚನ ಭ್ರಷ್ಟರಾದ ಜೆಡಿಎಸ್ ನಾಯಕರು ಬಿಜೆಪಿಯಲ್ಲಿ ಒಡಕುಂಟುಮಾಡಲು ಯತ್ನಿಸಿದ್ದರು ಎಂದು ಮಾಜಿ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶನಿವಾರ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ವಿರುದ್ಧ ಸಂಸದ ಅನಂತಕುಮಾರ್ ಅವರು ಪಿತೂರಿ ನಡೆಸಿದ್ದಾರೆ ಎಂದು ಕುಮಾರಸ್ವಾಮಿ ಅವರು ನಿರಾಧಾರ ಆರೋಪ ಮಾಡಿದರು ಎಂದು ಟೀಕಿಸಿದರು. ಬೆಳಗಾವಿಯೂ ಸೇರಿದಂತೆ ವಿವಿಧೆಡೆ ನಡೆದ ಕಾರ್ಯಕ್ರಮಗಳಲ್ಲಿ ಒಪ್ಪಂದದಂತೆ ಅಧಿಕಾರ ಹಸ್ತಾಂತರಿಸಲಾಗುವುದು ಎಂದು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಅನೇಕ ಬಾರಿ ಭರವಸೆ ನೀಡಿದ್ದನ್ನು ನೆನಪಿಸಿಕೊಂಡರು.ಆದರೆ ನಂತರ ಅದರ ಬಗ್ಗೆ ಬಿಜೆಪಿ ಮುಖಂಡರು ಚರ್ಚೆಯೇ ನಡೆಸಲಿಲ್ಲ ಎಂದು ಹೇಳಿರುವುದು ದುರದೃಷ್ಟಕರ ಎಂದರು.
ಜೆಡಿಎಸ್ ಸಚಿವರು ಹಲವಾರು ಬಾರಿ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ನಿಭಾಯಿಸುವ ಸಾಮರ್ಥ್ಯವಿಲ್ಲ ಎಂದು ಟೀಕಿಸಿದಾಗ ಅವರ ವಾಗ್ದಾಳಿಯನ್ನು ತಡೆಯಲು ಕುಮಾರಸ್ವಾಮಿ ಪ್ರಯತ್ನಿಸಲೇ ಇಲ್ಲ ಎಂದರು.
ಮಂಗಳೂರಿನಲ್ಲಿ ಇಬ್ಬರು ಅಲ್ಪ ಸಂಖ್ಯಾತರು ಕೊಲೆಗೀಡಾದಾಗ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲು ತಾವು ಭೇಟಿ ನೀಡಿರಲಿಲ್ಲ ಎಂದು ಗುರುತರ ಆರೋಪ ಮಾಡಿದ ದೇವೇಗೌಡರು ತಾವು ಸಂತ್ರಸ್ತರ ಮನೆಗೆ ಭೇಟಿ ನೀಡಿದ್ದಾಗಿ ಹೇಳಿದ್ದರೂ ಅದನ್ನು ಮರೆಮಾಚುತ್ತಲೇ ಇದ್ದಾರೆ, ಈ ಮೂಲಕ ಅಲ್ಪ ಸಂಖ್ಯಾತರಲ್ಲಿ ಬಿಜೆಪಿ ಬಗ್ಗೆ ಮತ್ಸರ ಉಂಟುಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಈಗಾಗಲೇ ರಾಜಭವನ ಕಾಂಗ್ರೆಸ್ ಕಚೇರಿಯಂತಾಗಿದೆ ಎಂದ ಅವರು ತಾವು ಚುನಾವಣೆಗೆ ಸಿದ್ಧ ಎಂದು ಘೋಷಿಸಲಿ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರನ್ನು ಒತ್ತಾಯಿಸಿದರು.
|