ಶುಕ್ರವಾರ ವಿಧ್ಯುಕ್ತ ಚಾಲನೆ ದೊರೆತ ವಿಶ್ವ ವಿಖ್ಯಾತ ಮೈಸೂರು ದಸರಾದ ವಿವಿಧ ಕಾರ್ಯಕ್ರಮಗಳು ಶನಿವಾರ ಆರಂಭಗೊಂಡಿವೆ. ದಸರಾ ಚಲನಚಿತ್ರೋತ್ಸವದ ಉದ್ಘಾಟನೆಯನ್ನು ನಟ ಹಾಗೂ ನಿರ್ಮಾಪಕ ಎಂ.ಪಿ.ಶಂಕರ್ ಅವರು ನೆರವೇರಿಸಿದರು.
ಮಾಜಿ ಮುಖ್ಯಮಂತ್ರಿ ಎಸ್. ಆರ್. ಬೊಮ್ಮಾಯಿ ಅವರ ನಿಧನದಿಂದ ಚಲನಚಿತ್ರೋತ್ಸವವೂ ಸೇರಿದಂತೆ ಹಲವು ಕಾರ್ಯಕ್ರಮಗಳು ಮುಂದೂಡಲಾಗಿತ್ತು. ಈ ಚಲನಚಿತ್ರೌತ್ಸವದ ಅಂಗವಾಗಿ ನಗರದ ಆಯ್ದ ಚಲನ ಚಿತ್ರಮಂದಿರಗಳಲ್ಲಿ ಆಯ್ದ ಕನ್ನಡ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಚಲನಚಿತ್ರೋತ್ಸವ ಕಾರ್ಯಕ್ರಮಕ್ಕೆ ಪಾರ್ವತಮ್ಮ ರಾಜಕುಮಾರ್ ಅವರು ಅಧ್ಯಕ್ಷತೆ ವಹಿಸಿದ್ದರು.
ಆ ಸಂದರ್ಭದಲ್ಲಿ ಮಾತನಾಡಿದ ಎಂ.ಪಿ.ಶಂಕರ್ ಅವರು ಸದಭಿರುಚಿಯ ಚಲನಚಿತ್ರಗಳು ಅಪರೂಪವಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಶನಿವಾರ ಸಂಜೆ ಉದ್ಘಾಟನೆಗೊಳ್ಳಲಿರುವ ದಸರಾ ಫಲ ಪುಷ್ಪ ಪ್ರದರ್ಶನದ ಪೂರ್ವ ಭಾವಿ ಫಲ ಪುಷ್ಪ ಪ್ರದರ್ಶನ ಆರಂಭಗೊಂಡಿದೆ.
ದೇವರಾಜ ಅರಸು ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ಕುಸ್ತಿ ಸ್ಪರ್ಧೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಅದೇ ರೀತಿ ಹಿರಿಯ ಐಎಎಸ್ ಅಧಿಕಾರಿ ಸುಧಾಕರರಾವ್ ಅವರು ದಸರಾ ವಸ್ತುಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
ರಾಜಕೀಯ ಅನಿಶ್ಚಿತತೆ, ರಾಜ್ಯದಲ್ಲಿ ರಾಷ್ಟ್ತ್ರಪತಿ ಆಡಳಿತವಿದ್ದರೂ ದಸರಾ ಮಹೋತ್ಸವಕ್ಕೆ ಜನರ ಉತ್ಸಾಹ ಎಳ್ಳಷ್ಟೂ ಕುಗ್ಗಿಲ್ಲ. ಮೈಸೂರು ರಸ್ತೆಗಳು ತುಂಬಾ ಜನಸಾಗರವೇ ಕಂಡುಬರುತ್ತಿದೆ.
ವಿದೇಶಿ ಪ್ರವಾಸಿಗರೂ ಸೇರಿದಂತೆ ಪ್ರವಾಸಿಗರ ಸಂಖ್ಯೆ ಹೆಚ್ಚಳದಿಂದ ಹೋಟೆಲುಗಳಲ್ಲಿ ಕೊಠಡಿಗಳು ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ.
|