ರೆಸಾರ್ಟ್ ರಾಜಕೀಯ ನಡೆಸಿ ಅಧಿಕಾರ ಸೂತ್ರ ಹಿಡಿದ ಜೆಡಿಎಸ್ ತಮ್ಮ ನೇತೃತ್ವದ ಸರ್ಕಾರ ಪತನಗೊಂಡ ನಂತರವೂ ಮತ್ರೆ ರೆಸಾರ್ಟ್ ರಾಜಕೀಯಕ್ಕೆ ಇಳಿದಿದೆ.
ಬೆಂಗಳೂರು ಹೊರವಲಯದ ಗೋಲ್ಡನ್ ಪಾಮ್ಸ್ ಅಂಡ್ ಸ್ಪಾ ಎಂಬ ರೆಸಾರ್ಟ್‌ನಲ್ಲಿ ಜೆಡಿಎಸ್ ಶಾಸಕರೆಲ್ಲರೂ ಮುಂದಿನ ರಾಜಕೀಯ ಹೆಜ್ಜೆ ಹೇಗಿರಬೇಕು ಎಂದು ನಿರ್ಧರಿಸಲು ಅಲ್ಲಿ ಸೇರಿದ್ದಾರೆ.
ಈಗಾಗಲೇ ಒಂದು ಸುತ್ತು ಚರ್ಚೆಗಳಾಗಿವೆ. ಪಕ್ಷದ ಬಹುತೇಕ ಶಾಸಕರು ಮಧ್ಯಂತರ ಚುನಾವಣೆಗೆ ವಿರೋಧ ವ್ಯಕ್ತಪಡಿಸಿದ್ದು, ಪರೋಕ್ಷ ಸರ್ಕಾರ ರಚನೆಗೆ ಒಲವು ತೋರಿದ್ದಾರೆ. ಹಿಗಾಗಿ ಸರ್ಕಾರ ರಚನೆ ಯತ್ನಕ್ಕೆ ಮತ್ತೊಂದು ಅವಕಾಶ ದೊರೆತಂತಾಗಿದೆ.
ಕಾಂಗ್ರೆಸ್ ಹೈಕಮಾಂಡ್‌ದ ಬಾಯಿಗೆ ಬೀಗ ಹಾಕಿಸಿಕೊಂಡಿರುವ ರಾಜ್ಯ ಕಾಂಗ್ರೆಸ್ ನಾಯಕರ ಪ್ರಯತ್ನಕ್ಕೆ ಬಾಗಿಲು ಮುಚ್ಚಿದಂತಾಗಿದೆ.
ಮಧ್ಯಂತರ ಚುನಾವಣೆ ಬೇಡ ಎನ್ನುವ ಶಾಸಕರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ಧ ಎಂದು ಘೋಷಿಸಿದ್ದಾರೆ.
ಚುನಾವಣೆಯೋ ಅಥವಾ ಸರ್ಕಾರ ರಚನೆಯೋ ಎಂಬ ಗೊಂದಲದಲ್ಲಿರುವ ಶಾಸಕರು ಮಂಗಳವಾರವೂ ಸಭೆ ನಡೆಸಿದ್ದಾರೆ. ಸಭೆ ಮುಗಿದಬಳಿಕ ಸಭೆಯ ನಿರ್ಣಯಗಳು ಬಹಿರಂಗಗೊಳ್ಳಲಿವೆ.
ಸೋಮವಾರ ಸಂಜೆ ನಡೆದ ಸಭೆಯಲ್ಲಿ ಬಹುತೇಕ ಶಾಸಕರು ಅದರಲ್ಲೂ ಮೊದಲಬಾರಿ ಚುನಾಯಿತರಾದ ಶಾಸಕರು ಚುನಾವಣೆಯಲ್ಲಿ ಗೆಲ್ಲುವುದು ಬಹಳ ಕಷ್ಟ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇನ್ನು 10 ತಿಂಗಳು ಚುನಾವಣೆಯೇ ಬೇಡ ಎಂಬುದು ಆ ಶಾಸಕರ ಒಕ್ಕೂರಲ ಒತ್ತಾಯವಾಗಿತ್ತು. ಮತ್ತೆ ಕೆಲ ಶಾಸಕರು ಚುನಾವಣೆಗೆ ಹೋಗುವುದೇ ಸೂಕ್ತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈಗ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸುವ ಅವಕಾಶ ಇಲ್ಲವಾಗಿದೆ. ಒಂದು ವೇಳೆ ಬಿಜೆಪಿ ಜತೆ ಮರು ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾದರೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಇರುವುದರಿಂದ ವಿಧಾನಸಭೆ ವಿಸರ್ಜಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವುದಂತೂ ಕಟ್ಟಿಟ್ಟ ಬುತ್ತಿ ಎಂಬುದು ಶಾಸಕರ ಭಾವನೆ.
ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸುವುದಾದರೆ ಮುಂದಿನ ಚುನಾವಣೆಯಲ್ಲಿ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ, ಇದಕ್ಕೆ ಬದಲಾಗಿ ಮಧ್ಯಂತರ ಚುನಾವಣೆಗೆ ಹೊಗಿ ಪಕ್ಷದ ಗೆಲುವಿಗೆ ಶ್ರಮಿಸುವುದೇ ಸೂಕ್ತ ಎಂಬುದು ಕೆಲವರ ಸ್ಪಷ್ಟ ಅಭಿಪ್ರಾಯ.
ಮಧ್ಯಂತರ ಚುನಾವಣೆಗೆ ಪಕ್ಷದ ಶಾಸಕರನ್ನು ಒಪ್ಪಿಸುವ ಜವಾಬ್ದಾರಿಯನ್ನು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಪುತ್ರ ಕುಮಾರಸ್ವಾಮಿಗೆ ವಹಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
|