ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಮುಖಂಡ ಜನಾರ್ದನ ರೆಡ್ಡಿ ಸುಪ್ರೀಂಕೋರ್ಟ್‌ನಲ್ಲಿ ಹೊಸದಾಗಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಮುಖಂಡರಿಂದ ತಮ್ಮ ಮೇಲಾಗುತ್ತಿರುವ ಕಿರುಕುಳ ಹಾಗೂ ಕುಮಾರಸ್ವಾಮಿ ವಿರುದ್ಧದ ಕೊಲೆ ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ ಬಳ್ಳಾರಿ ಪೊಲೀಸರು ವರ್ತನೆ ಬಗ್ಗೆ ದೂರು ನೀಡಿದ್ದಾರೆ.
ಸದ್ಯಕ್ಕೆ ಸುಪ್ರೀಂಕೊರ್ಟ್‌ನಲ್ಲಿ ಗಣಿ ಹಗರಣ ಕುರಿತಂತೆ ತಾವು ಸಲ್ಲಿಸಿದ ಅರ್ಜಿಯ ವಿಚಾರಣೆ ಮುಂದುವರೆದಿದೆ. ತಮ್ಮ ಕುಟುಂಬಕ್ಕೆ ಕುಮಾರಸ್ವಾಮಿ ಮತ್ತು ಜೆಡಿಎಸ್ ಮುಖಂಡರು ನಿರಂತರ ಕಿರುಕುಳ ನೀಡುತ್ತಿದ್ದಾರೆ.
ಇತ್ತೀಚಿಗೆ ಮಹಾನಗರ ಪಾಲಿಕೆ ಚುನಾವಣೆ ವೇಳೆ ತಮ್ಮ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ತಮ್ಮ ಹತ್ಯೆಗೆ ಪ್ರಯತ್ನ ನಡೆಸಲಾಗಿದೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.
ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮಿಂದ 150 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಮಾಡಿದ್ದ ಆರೋಪವನ್ನು ಹಲವುಬಾರಿ ಪುನುರುಚ್ಚರಿಸಿದ ಜನಾರ್ದನರೆಡ್ಡಿಯವರನ್ನು ಸಮ್ಮಿಶ್ರ ಸರ್ಕಾರದ ಅಂಗ ಪಕ್ಷವಾಗಿರುವ ಬಿಜಿಪಿ ಕುಮಾರಸ್ವಾಮಿ ಅವರ ಒತ್ತಡಕ್ಕೆ ಮಣಿದು ಪಕ್ಷದಿಂದ ಅಮಾನತು ಗೊಳಿಸಿತ್ತು.
ಅಧಿಕಾರ ಹಸ್ತಾಂತರಿಸಿದ್ದರಿಂದ ಬಿಜೆಪಿ ಕ್ರಮದಿಂದಾಗಿ ಸರ್ಕಾರ ಪತನಗೊಂಡನಂತರ ಅವರ ಮೇಲಿನ ಅಮಾನತು ರದ್ದಾಯಿತು.
ಅದಲ್ಲದೆ ಇತ್ತೀಚಿನ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲು ರೆಡ್ಡಿ ಅವರೂ ಒಂದು ಕಾರಣ ಎಂದು ಬಿಜೆಪಿ ವರಿಷ್ಠ ಮಂಡಳಿ ಪರಿಗಣಸಿದೆ.
|