ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವಿದೆ. ಬಹುಮತವಿಲ್ಲದ ಪಕ್ಷಗಳು ಇರುವುದರಿಂದ ಸರ್ಕಾರ ರಚನೆ ಯಾಗಬೇಕಾದರೆ ಬೇರೆ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳಲೇಬೇಕು. ಆ ನಿಟ್ಟಿನಲ್ಲಿ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಸಂಬಂಧಗಳು ಹಳಸಿಹೋಗುವಷ್ಟು ಕೆಟ್ಟಿವೆ. ರಾಜ್ಯಕೀಯದಲ್ಲಿ ಯಾವುದೂ ಅಸಾಧ್ಯವಿಲ್ಲ ಎಂಬ ಮಾತಿದೆ. ಅದರಂತೆ ಪಕ್ಷಗಳು ತಮ್ಮ ವೈಮನಸ್ಯವನ್ನು ಮರೆತು ಸರ್ಕಾರ ರಚನೆಗೆ ಮುಂದಾಗುವುದು ಅನುಮಾನದ ಸಂಗತಿ. ಆದರೆ ಮುಂದಿನ ದಾರಿ ಯಾವುದು ಎಂಬ ಗೊಂದಲದಲ್ಲಿ ಮೂರು ರಾಜಕೀಯ ಪ್ರಬಲ ಪಕ್ಷಗಳು ಇವೆ.
ಮಧ್ಯಂತರ ಚುನಾವಣೆಗೆ ಹೋಗುವುದೇ ಲೇಸು ಎಂಬ ಅಭಿಪ್ರಾಯವನ್ನು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ವಕ್ತಪಡಿಸಿವೆ. ರಾಜ್ಯದಲ್ಲಿ ಹೊಸ ಜನಾದೇಶ ಪಡೆಯುವ ದಿಸೆಯಲ್ಲಿ ತಾವು ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಜತೆ ಚರ್ಚೆ ನಡೆಸಿರುವುದಾಗಿ ಮಾಜಿ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಇನ್ನೆರಡು ಮೂರು ದಿನಗಳಲ್ಲಿ ಈ ಮೂರೂ ಪಕ್ಷಗಳ ಮುಖಂಡರೂ ಒಂದೇ ವೇದಿಕೆಯಲ್ಲಿ ಸೇರಿ ಚುನಾವಣೆಗೆ ಹೋಗುವ ಕುರಿತು ಪ್ರಕಟಿಸಲಿದ್ದಾರೆ ಎಂಬುದು ಯಡಿಯೂರಪ್ಪ ಅವರ ಮಾತಿನ ತಾತ್ಪರ್ಯ. ಈಗಿನ ಸನ್ನಿವೇಶದಲ್ಲಿ ಚುನಾವಣೆಗೆ ಹೋಗುವುದೊಂದೇ ಇರುವ ಏಕೈಕ ಮಾರ್ಗ ಎಂದು ಅವರು ಹೇಳಿದ್ದಾರೆ.
ಚುನಾಯಿತ ಪ್ರತಿನಿಧಿಗಳು ಹಾಗೂ ಜನತಂತ್ರ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಕಡಿಮೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ರಾಜ್ಯದ ಎಲ್ಲ ರಾಜಕೀಯ ಪಕ್ಷಗಳಿಗೆ ಜನತಾ ನ್ಯಾಯಾಲಯದ ಮುಂದೆ ಹೋಗುವುದೊಂದೇ ಈಗಿರುವ ಏಕೈಕ ಮಾರ್ಗ ಎಂದು ಅವರು ತಿಳಿಸಿದ್ದಾರೆ.
|