ಸರಕಾರ ರಚನೆಗೆ ಜೆಡಿಎಸ್ ಒಲವು ಮಧ್ಯಂತರ ಚುನಾವಣೆ ಅಥವಾ ಪರ್ಯಾಯ ಸರಕಾರ ರಚನೆ ಯತ್ನ ಕುರಿತಂತೆ ಜೆಡಿಎಸ್ ಎರಡು ದಿನ ನಡೆಸಿದ ಸಭೆಯಲ್ಲಿ ಅಂತಿಮ ನಿರ್ಣಯಕ್ಕೆ ಬರಲಾಗದೆ ಸಭೆ ಮುಕ್ತಾಯಗೊಂಡಿದೆ.
ಕಳೆದ ಎರಡು ದಿನಗಳಿಂದ ಬೆಂಗಳೂರು ನಗರದ ಹೊರವಲಯದ ರೆಸಾರ್ಟ್‌ನಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಎರಡೂ ಆಯ್ಕೆಗಳ ನಡುವೆ ಒಮ್ಮತ ಮೂಡಲಿಲ್ಲ.
ಚುನಾವಣೆಗೆ ಪಕ್ಷದ ಬಹುತೇಕ ಶಾಸಕರ ತೀವ್ರ ವಿರೋಧ ವ್ಯಕ್ತವಾದರೂ,ಈ ವಿಚಾರದಲ್ಲಿ ಪರಿಸ್ಥಿತಿ ಗಮನಿಸಿ ಅಂತಿಮ ನಿರ್ಧಾರಕ್ಕೆ ಬರುವ ಅಧಿಕಾರವನ್ನು ಸಭೆ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ,ಹಿರಿಯ ನಾಯಕ ಎಂ.ಪಿ.ಪ್ರಕಾಶ್ ಹಾಗೂ ರಾಜ್ಯಾಧ್ಯಕ್ಷ ಮಿರಾಜುದ್ದೀನ್ ಪಟೇಲ್ ಅವರಿಗೆ ನೀಡುವ ಅಂತಿಮ ನಿರ್ಣಯ ಕೈಗೊಂಡಿತು.
ಮಧ್ಯಂತರ ಚುನಾವಣೆ ಎದುರಿಸುವುದೋ ಅಥವಾ ಪರ್ಯಾಯ ಸರಕಾರ ರಚನೆ ಪ್ರಯತ್ನಕ್ಕೆ ಮುಂದಾಗುವುದೋ ಎಂಬ ಬಗ್ಗೆ ಈ ಮೂವರು ಮುಖಂಡರು ಎರಡು ದಿನಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು.ಅಂತಹ ನಿರ್ಧಾರಕ್ಕೆ ಬದ್ದರಾಗಲು ಶಾಸಕರು ಒಪ್ಪಿದರು.
ಪರ್ಯಾಯ ಸರಕಾರ ರಚನೆಗಾಗಿ ಜೆಡಿಎಸ್ ವಿಭಜಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಪ್ರಯತ್ನಿಸುತ್ತಿವೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಬಹುತೇಕ ಮಂದಿ ಪರ್ಯಾಯ ಸರಕಾರ ರಚನೆ ಸಾಧ್ಯತೆಗಳ ಬಗ್ಗೆ ಒಲವು ತೋರಿದರು.
|