ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ನಡೆಯುತ್ತಿರುವ ಮಧ್ಯೆಯೇ ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ರಚಿಸಲು ಪಕ್ಷೇತರ ಶಾಸಕರು ಆಸಕ್ತಿ ತೋರಿದ್ದಾರೆ. ಪಕ್ಷೇತರ ಶಾಸಕ ಜಯಪ್ರಕಾಶ ಹೆಗ್ಡೆ ಈ ನೇತೃತ್ವವನ್ನು ವಹಿಸಿದ್ದು, ಪಕ್ಷೇತರ ಶಾಸಕರ ಸಭೆ ಇಂದು ನಡೆದಿದೆ.
ಮಧ್ಯಂತರ ಚುನಾವಣೆಯನ್ನು ತಡೆಗಟ್ಟಿ ಇದಕ್ಕೆ ಸೂಕ್ತ ಪರಿಹಾರವಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚಿಸುವುದು ಅನಿವಾರ್ಯ ಎಂದು ಜಯಪ್ರಕಾಶ್ ಹೆಗಡೆ ಹೇಳಿದರು.
ಈ ಹಿಂದೆಯೇ ವಾಟಾಳ್ ನಾಗರಾಜ್ ಪಕ್ಷೇತರ ಶಾಸಕರ ನೇತೃತ್ವದ ಸರ್ಕಾರ ರಚಿಸಲು ಹೆಚ್ಚಿನ ಆಸಕ್ತಿ ವಹಿಸಿದ್ದರು. ಆದರೆ ಪಕ್ಷೇತರ ಶಾಸಕರ ಅಭಿಪ್ರಾಯಕ್ಕೆ ಎರಡೂ ಪಕ್ಷಗಳು ಯಾವುದೇ ರೀತಿಯ ಪ್ರತಿಕ್ರಿಯೆ ತೋರಿಸಿಲ್ಲ.
ಈ ನಡುವೆ ಬಿಜೆಪಿ ಮಧ್ಯಂತರ ಚುನಾವಣೆಯೇ ರಾಜ್ಯದ ಮುಂದಿರುವ ದಾರಿ ಎಂದು ಸ್ಪಷ್ಟಪಡಿಸಿದೆ. ಪಕ್ಷೇತರ ಶಾಸಕರ ಸಭೆಯ ಈ ತೀರ್ಮಾನ ರಾಜ್ಯ ರಾಜಕೀಯದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.
|