ಇಬ್ಬರ ಜಗಳದಿಂದಾಗಿ ಕೋಲಾಹಲದ ಗೂಡಾಗಿರುವ ಕರ್ನಾಟಕ ರಾಜಕೀಯ ಮತ್ತೊಂದು ಮಗ್ಗುಲಿನತ್ತ ಹೊರಳುತ್ತಿದ್ದು, ಜಾತ್ಯತೀತ ಜನತಾ ದಳ ಒಡಕಿನ ಹಂತ ತಲುಪಿದೆ.
ಪಕ್ಷದ ಬಹುತೇಕ ಶಾಸಕರು ದೇವೇಗೌಡ ಮತ್ತು ಅವರ ಕುಟುಂಬ ರಾಜಕಾರಣದ ವಿರುದ್ಧ ಬಂಡೆದಿದ್ದಾರೆ. ಮಾಜಿ ಸಚಿವ ಎಂ.ಪಿ.ಪ್ರಕಾಶ್ ಅವರನ್ನು ನಾಯಕರನ್ನಾಗಿ ಘೋಷಿಸಿಕೊಂಡಿರುವ ಶಾಸಕರು, ಕಾಂಗ್ರೆಸ್ ಜತೆ ಮರು ಮೈತ್ರಿ ಮಾಡಿಕೊಂಡು ಸರಕಾರ ರಚಿಸಲು ಸಿದ್ಧತೆ ನಡೆಸಿದ್ದಾರೆ.
ಇದೇ ಕಾರಣಕ್ಕೆ ಕೆಲವು ಶಾಸಕರೊಂದಿಗೆ ನವದೆಹಲಿಗೆ ತೆರಳಿರುವ ಪ್ರಕಾಶ್ ಅವರು ಇಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆಗೆ ಮಾತುಕತೆ ನಡೆಸುವ ಕಾರ್ಯಕ್ರಮವಿದೆ.
ಈ ಹಠಾತ್ ರಾಜಕೀಯ ವಿದ್ಯಮಾನಗಳಿಂದ ಪಕ್ಷ ಇಬ್ಭಾಗವಾಗುವ ಸ್ಪಷ್ಟ ಲಕ್ಷಣ ಕಂಡುಬಂದಿದೆ.
ಕಳೆದ ವಾರ ನಡೆದ ಶಾಸಕಾಂಗ ಸಭೆಯ ನಿರ್ಣಯವನ್ನು ಮಾನ್ಯ ಮಾಡದ ಗೌಡರ ಬಗ್ಗೆ ಬಹುತೇಕ ಶಾಸಕರು ಸಿಡಿದಿದ್ದಾರೆ. ಮಧ್ಯಂತರ ಚುನಾವಣೆಗೆ ಗೌಡರು ಒಲವು ತೋರುತ್ತಿರುವುದು ಶಾಸಕರ ಅಸಮಾಧಾನಕ್ಕೆ ಮುಖ್ಯ ಕಾರಣ.
ಕಳೆದ 20 ತಿಂಗಳ ಹಿಂದೆ ಬಿಜೆಪಿ ಜತೆ ಮೈತ್ರಿ ಕುದುರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂತೋಷ್ ಲಾಡ್ ಅವರೇ ಈಗಲೂ ಕಾಂಗ್ರೆಸ್ ಮರು ಮೈತ್ರಿ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ. ಸೋಮವಾರ ನವದೆಹಲಿಗೆ ತೆರಳಿದ್ದ ಪ್ರಕಾಶ್, ಸರಕಾರ ರಚನೆ ಕುರಿತು ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್, ಕರ್ನಾಟಕದ ನೇತೃತ್ವ ವಹಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ಚವ್ಹಾಣ್ ಮತ್ತು ಮೋತಿಲಾಲ್ ವೋರಾ ಅವರೊಂದಿಗೆ ಸಮಾಲೋಚಿಸಿದ್ದಾರೆ ಎಂದು ತಿಳಿದು ಬಂದಿದೆ.
|