ಜೆಡಿಎಸ್‌ಗೆ ಚುನಾವಣೆ ಎದುರಿಸುವುದೇ ಏಕೈಕ ಮಾರ್ಗ, ಈಗಿರುವ ಜೆಡಿಎಸ್ ಎಲ್ಲಾ ಶಾಸಕರಿಗೂ ಟಿಕೆಟ್ ನೀಡುತ್ತೇವೆ, ಪಕ್ಷದ ಸಂಘಟನೆಯೇ ತಕ್ಷಣ ಕರ್ತವ್ಯ ಎಂದು ಜೆಡಿಎಸ್ ವರಿಷ್ಠ ದೇವೇಗೌಡರು ಘೋಷಿಸಿದ್ದರೂ ಅವರ ಮಾತುಗಳಿಗೆ ಬೆಲೆ ಕೊಡದೆ ಕಾಂಗ್ರೆಸ್ ಜತೆಗೆ ಮರು ಮೈತ್ರಿ ಯತ್ತ ಯತ್ನ ನಡೆಯುತ್ತಿದೆ.
ದೇವೇಗೌಡರ ಕುಟುಂಬವನ್ನು ಈ ಪ್ರಯತ್ನದಿಂದ ಹೊರಗಿಡಿ ಎಂಬ ಕಾಂಗ್ರೆಸ್ ನಾಯಕರ ತಾಕೀತಿನಂತೆ ಜೆಡಿಎಸ್ ಹಿರಿಯ ಮುಖಂಡ ಎಂ.ಪಿ.ಪ್ರಕಾಶ್ ನಡೆದುಕೊಳ್ಳುತ್ತಿರುವ ರೀತಿ ನೋಡಿ ಕಂಗಾಲಾದ ದೇವೇಗೌಡರು ದೆಹಲಿಗೆ ದೌಡಾಯಿಸಿದ್ದಾರೆ.
ಮೈತ್ರಿಯೂ ಇಲ್ಲ, ಎಂಥದೂ ಇಲ್ಲ ಎಂದು ಹೇಳಿಕೊಂಡು ಬಂದಿದ್ದ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಗ ಬದಲಾಯಿಸಿ ಪ್ರಕಾಶ್ ಜತೆಗೆ ಎಷ್ಟು ಶಾಸಕರಿದ್ದಾರೆ ಎಂಬುದನ್ನು ಆಧರಿಸಿ ಹೈಕಮಾಂಡ್ ಸೂಕ್ತ ನಿರ್ಧಾರಕ್ಕೆ ಬರಲಿದ ಎಂದಿರುವುದು ಜೆಡಿಎಸ್ ಹೋಳಾಗುವ ಸ್ಪಷ್ಟ ಸೂಚನೆ ದೊರೆತಿದೆ. ಜೆಡಿಎಸ್‌ನಲ್ಲಿದ್ದರೂ ಸಿದ್ದರಾಮಯ್ಯ ಅವರ ಬಣದವರೇ ಎಂದು ಗುರುತಿಸಿಕೊಂಡಿರುವ ಎಂಟರಿಂದ ಹತ್ತು ಶಾಸಕರು ಈಗಾಗಲೇ ಪ್ರಕಾಶ್ ಬೆಂಬಲಕ್ಕಿದ್ದಾರೆ ಎಂದು ಹೇಳಲಾಗಿದೆ.
ಕಾಂಗ್ರೆಸ್ನೊಂದಿಗೆ ಮರು ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲು ಅಗತ್ಯವಿರುವ ಉಳಿದ 29 ಶಾಸಕರನ್ನು ಕರೆತರುವ ಜವಾಬ್ದಾರಿಯನ್ನು ಪ್ರಕಾಶ್ ಅವರ ಮೇಲೆ ದೆಹಲಿಯ ಕಾಂಗ್ರೆಸ್ ಮುಖಂಡರು ಹೊರಿಸಿದ್ದಾರೆ.
ಈ ಲೆಕ್ಕಾಚಾರಗಳೆಲ್ಲವೂ ಸುಗಮವಾಗಿ ನಡೆದರೆ ಗೌಡರನ್ನು ಎದುರು ಹಾಕಿಕೊಂಡು ಸರ್ಕಾರ ರಚಿಸಿದ ಕೀರ್ತಿ ಪ್ರಕಾಶ್ ಅವರಿಗೆ ಸಲ್ಲುತ್ತದೆ.
ಇನ್ನೊಂದೆಡೆ ತಮ್ಮ ವಿರೋಧಿ ಗೌಡರನ್ನು ಹೊರಗಿಟ್ಟು ಸರಕಾರ ರಚಿಸುವುದು ಮತ್ತು ಜೆಡಿಎಸ್ ಪಕ್ಷವನ್ನು ಒಡೆದ ಕೀರ್ತಿ ಸಿದ್ದು ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಸಲ್ಲಲಿದೆ.
|