ಕಿತ್ತೂರು ಚೆನ್ನಮ್ಮನ ನೈಜ ಇತಿಹಾಸದ ಬಗ್ಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಜನರಿಗೆ ತಿಳಿಯಲು ಅನುಕೂಲವಾಗುವಂತೆ ಸಂಶೋಧನಾ ಮಂಡಳಿವೊಂದನ್ನು ರಚಿಸುವ ಅವಶ್ಯಕತೆಯಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ|| ಎಂ.ಎಂ. ಕಲಬುರ್ಗಿ ಅವರು ಹೇಳಿದ್ದಾರೆ.
ಕಿತ್ತೂರನಲ್ಲಿ ಮೂರು ದಿನಗಳ ಕಾಲ ನಡೆದ ಕಿತ್ತೂರು ಉತ್ಸವ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದ ಅವರು, ವೀರರಾಣಿ ಕಿತ್ತೂರ ಚೆನ್ನಮ್ಮ ಹಾಗೂ ಕಿತ್ತೂರು ಸಂಸ್ಥಾನದ ಇತಿಹಾಸಕ್ಕೆ ಸಂಬಂಧಿಸಿದಂತೆ ದಾಖಲೆಗಳು ಲಂಡನ್, ಪುಣೆ ಹಾಗೂ ಕರ್ನಾಟಕ ವಿವಿಧ ಭಾಗಗಳಲ್ಲಿ ಹಂಚಿ ಹೋಗಿವೆ. ಈ ಎಲ್ಲ ದಾಖಲೆಗಳ ಕ್ರೋಢೀಕರಣ ಮಾಡಿ ನೈಜ ಇತಿಹಾಸವನ್ನು ಜನರಿಗೆ ತಿಳಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಅವರು ಹೇಳಿದರು.
ಕಿತ್ತೂರು ಚೆನ್ನಮ್ಮಳ ಹೋರಾಟವು ಸ್ವಾಭಿಮಾನ, ಸ್ವಾತಂತ್ರ್ಯ, ಸ್ತ್ತ್ರೀಶಕ್ತಿಯ ಪ್ರತೀಕವಾಗಿದೆ. ಈ ಕಿತ್ತೂರಿನ ಹೋರಾಟವು ಮುಂದಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆಯಾಯಿತು. ಇಂತಹ ಮಹಾನ್ ದೇಶಪ್ರೇಮಿಯ ಕುರಿತು ಇನ್ನೂ ಹೆಚ್ಚು ಹೆಚ್ಚು ಸಂಶೋಧನೆ ನಡೆಯಬೇಕಾಗಿದೆ ಎಂದರು.
ಅತ್ಯುತ್ತಮ ಸಾಧನೆ ಮಾಡುವವರಿಗೆ ಕಿತ್ತೂರ ಚೆನ್ನಮ್ಮನ ಹೆಸರಿನಲ್ಲಿ ರಾಷ್ಟ್ತ್ರೀಯ ಪ್ರಶಸ್ತಿವೊಂದನ್ನು ನೀಡುವಂತಹ ಪರಂಪರೆ ಆರಂಭವಾಗಬೇಕು. ಈ ದಿಸೆಯಲ್ಲಿ ಇನ್ನೂ ಹೆಚ್ಚಿನ ಪ್ರಯತ್ನಗಳು ನಡೆಯಬೇಕಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಮಾತನಾಡಿದ ವಾರ್ತಾ ಇಲಾಖೆಯ ಆಯುಕ್ತರಾದ ಕೆ.ವಿ.ಆರ್. ಠ್ಯಾಗೂರ ಅವರು ವೀರರಾಣಿ ಕಿತ್ತೂರು ಚೆನ್ನಮ್ಮ ದೇಶ ದ್ರೋಹಿಗಳನ್ನು, ದುಷ್ಟ ಶಕ್ತಿಗಳನ್ನು ಅಡಗಿಸಲು ಧೈರ್ಯದಿಂದ ಹೋರಾಡಿದಳು. ಅದರಂತೆ ಈಗಿನ ಮಹಿಳೆಯರು ಸಹ ದೇಶಪ್ರೇಮ ಬೆಳೆಸಿಕೊಳ್ಳಬೇಕು. ಈ ನಾಡಿನ ಸಂಸ್ಕ್ಕತಿಯನ್ನು ಹಾಗೂ ನಮ್ಮತನವನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಕರೆ ನೀಡಿದರು.
|